ಶೀಘ್ರದಲ್ಲಿ ಯುವನಿಧಿ ಜಾರಿ -:ಸಚಿವ ಸಂತೋಷ್ ಲಾಡ್


ಸಂಜೆವಾಣಿ ವಾರ್ತೆ
ಹೊಸಪೇಟೆ 7: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಯುವನಿಧಿ ಕಾರ್ಯಕ್ರಮ ಜಾರಿ ಮಾಡಲಾಗುವುದು. ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೂ ಮಾಸಿಕ ತಲಾ 2000 ರು. ನೀಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಐದು ಗ್ಯಾರಂಟಿಗಳ ಜಾರಿಗೆ ಅಂದಾಜು 60 ಸಾವಿರ ಕೋಟಿ ರು. ಆಗಲಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯನವರು ಈ ಯೋಜನೆಗಳ ಸಾಕಾರಕ್ಕೆ ಕ್ರಮವಹಿಸಿದ್ದಾರೆ. ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ ಸಾಕಾರಗೊಳಿಸಲಾಗಿದೆ. ಶಕ್ತಿ ಯೋಜನೆಯಡಿ ಶೇ.94ರಷ್ಟು ಮಹಿಳೆಯರು ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಯುವನಿಧಿ ಯೋಜನೆಯಡಿ ಪದವಿ, ಡಿಪ್ಲೋಮಾದಲ್ಲಿ 2023-24ನೇ ಸಾಲಿನಲ್ಲಿ ಪಾಸಾಗಿ, ಆರು ತಿಂಗಳವರೆಗೆ ಕೆಲಸ ದೊರೆಯದಿದ್ದರೆ, ಅಂತಹವರಿಗೆ ಎರಡು ವರ್ಷಗಳ ವರೆಗೆ ಸರ್ಕಾರದಿಂದ ಶಿಷ್ಯವೇತನ ನೀಡಲಾಗುವುದು ಎಂದರು.
ಗ್ಯಾರಂಟಿಗಳಿಗೆ 60 ಸಾವಿರ ಕೋಟಿ ರು. ನೀಡುತ್ತಿರುವುದರಿಂದ ಸಹಜವಾಗಿ ಅನುದಾನದ ಕೊರತೆ ಉಂಟಾಗುತ್ತದೆ. ಇದನ್ನು ನಾವು ಒಪ್ಪುತ್ತೇವೆ, ಇಷ್ಟೊಂದು ದೊಡ್ಡ ಗಾತ್ರದ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತಿರುವುದರಿಂದ ಇದೇಲ್ಲ ಸಹಜ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷದವರು ವರ್ಗಾವಣೆ ದಂಧೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ದಾಖಲೆ ಕೊಡಲಿ, ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳು ಇವೆ, ಅವರು ಅಲ್ಲಿ ಕೊಡ್ತಿವಿ ಎಂದರೇ ಅಲ್ಲಿ ಕೊಡಲಿ. ರಾಜ್ಯ ಸರ್ಕಾರ ವರ್ಗಾವಣೆ ದಂಧೆ ಮಾಡುತ್ತಿಲ್ಲ. ಇದೊಂದು ಆಡಳಿತಾತ್ಮಕ ಪ್ರಕ್ರಿಯೆ ಅಷ್ಟೇ ಎಂದರು.
ಶಾಸಕರು, ಸಚಿವರ ನಡುವೆ ಯಾವುದೇ ರೀತಿಯಲ್ಲಿ ಸಮನ್ವಯದ ಕೊರತೆ ಇಲ್ಲ. ಹೊಸ ಸರ್ಕಾರ ಇರುವುದರಿಂದ ಸಹಜವಾಗಿ ಶಾಸಕರು ಮತ್ತು ಸಚಿವರ ನಡುವೆ ಸಮನ್ವಯತೆ ಆಗಬೇಕಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯನವರು ಜಿಲ್ಲಾವಾರು ಸಭೆ ಕರೆದಿದ್ದಾರೆ. ಎಲ್ಲವೂ ಬಗೆಹರಿಯಲಿದೆ ಎಂದರು.
ವಿಜಯನಗರ, ಬಳ್ಳಾರಿ ಅವಳಿ ಜಿಲ್ಲೆಗಳ ಅಭಿವೃದ್ಧಿಗೆ ಡಿಎಂಎಫ್ ಅನುದಾನ ಸಾಕಷ್ಟು ಇದೆ. ಅವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಸ್ಯೆ ಇಲ್ಲ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೂ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಸಿಎಂ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಆದ್ಯತೆ ನೀಡಿದ್ದರು, ಈಗಲೂ ಆದ್ಯತೆ ನೀಡುತ್ತಿದ್ದಾರೆ ಎಂದರು.
ಶಾಸಕರಾದ ಎಚ್.ಆರ್. ಗವಿಯಪ್ಪ, ಈ. ತುಕಾರಾಂ, ಕಾಂಗ್ರೆಸ್ ಪಕ್ಷದ ಮುಖಂಡರಾದ ಎಚ್‍ಎನ್‍ಎಫ್ ಇಮಾಮ್ ನಿಯಾಜಿ, ಗುಜ್ಜಲ ರಘು, ಗುಜ್ಜಲ ನಾಗರಾಜ ಹಾಜರಿದ್ದರು.