ಶೀಘ್ರದಲ್ಲಿ ತಜ್ಞ ವೈದ್ಯರ ನೇಮಕ: ಡಾ. ರಾಮಕೃಷ್ಣ

ಲಿಂಗಸುಗೂರು.ಏ.೦೮-ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಇನ್ನುಳಿದ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರದಲ್ಲಿಯೆ ತಜ್ಞ ವೈದ್ಯರ ನೇಮಕ ಮಾಡಲಾಗುವುದು ಎಂದು ಡಿಎಚ್‌ಒ ಡಾ. ರಾಮಕೃಷ್ಣ ಹೇಳಿದರು.
ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹಿಬೂಬಪಾಷ ನೇತೃತ್ವದಲ್ಲಿ ಕಾರ್ಯಕರ್ತರು ಆಸ್ಪತ್ರೆಗಳಿಗೆ ತಜ್ಞ ವೈದ್ಯರು, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಪಡಿಸಿದರು.
ಡಿಎಚ್‌ಒ ಮಾತನಾಡಿ, ಈಗಾಗಲೆ ತಾಲ್ಲೂಕು ಆರೋಗ್ಯ ಅಧಿಕಾರಿಗಳಿಂದ ಎಲ್ಲ ಮಾಹಿತಿ ಪಡೆದಿರುವೆ. ಚುನಾವಣಾ ನೀತಿ ಸಂಹಿತೆ ಮುಗಿದಾಕ್ಷಣ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕೋವಿಡ್ ಲಸಿಕೆ ಅಭಿಯಾನ ಯಶಸ್ವಿಗೊಳಿಸಬೇಕು. ಅಭಿಯಾನಕ್ಕೆ ಸಹಕಾರ ನೀಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಈಗಾಗಲೇ ೪೫ ರಿಂದ ೬೦ ವರ್ಷದೊಳಗಿನವರಿಗೆ ೨೦೪೨೨ ಜನರಿಗೆ ಲಸಿಕೆ ಹಾಕಲಾಗಿದೆ. ಈ ಪೈಕಿ ೪೫ ರಿಂದ ೫೯ ರ ವರ್ಷದವರಿಗೆ ೯೩೭೩ ಹಾಗೂ ೬೦ ವರ್ಷ ಮೇಲ್ಪಟ್ಟವರಿಗೆ ೧೧೦೪೯ ಲಸಿಕೆ ಹಾಕಲಾಗಿದೆ.
ಈಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆ ಮಾಡಿರುವ ಆರೋಪ ಗಂಭಿರವಾಗಿ ಪರಿಗಣಿಸಿದೆ. ಈ ಕುರಿತು ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿಗೆ ನೋಟಿಸ್ ನೀಡಲು ಸೂಚಿಸಿದರು.
ಸಾರ್ವಜನಿಕರು ಪ್ರತಿ ಗ್ರಾಮದಲ್ಲಿ ಲಸಿಕೆ ಹಾಕಿಸಲು ಮುಂದೆ ಬರಬೇಕು. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ.ಮುದ್ರಾಗೌಡ ಆಸ್ಪತ್ರೆ ಮುಖ್ಯಾಅಧಿಕಾರಿ ಲಿಂಗಸೂಗೂರು, ಡಾ.ಅಂಬ್ರೇಶ್ ಪಾಟೀಲ್ ಚಾಲುಕ್ಯ ಆರೋಗ್ಯ ಅಧಿಕಾರಿ ಲಿಂಗಸೂಗೂರು ಆಸ್ಪತ್ರೆ ಇತರರು ಉಪಸ್ಥಿದ್ದರು.