ಶೀಘ್ರದಲ್ಲಿ ಆಟೋ ಪ್ರಯಾಣ ದರ ಏರಿಕೆ


ಬೆಂಗಳೂರು, ಅ. ೧ – ಒಂದೆಡೆ ಕೋವಿಡ್ ಸಂಕಷ, ಮತ್ತೊಂದೆಡೆ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆ ಮತ್ತೊಂದು ಶಾಕ್ ಎದುರಿಸುವಂತಾಗಿದೆ.
ಆಟೋ ರಿಕ್ಷಾ ಪ್ರಯಾಣ ದರವನ್ನು ಏರಿಕೆ ಮಾಡಲು ಸರ್ಕಾರ ಉದ್ದೇಶಿಸಿದೆ.
೨೦೧೩ರಲ್ಲಿ ಆಟೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಹೀಗಾಗಿ ಕಳೆದ ೮ ವರ್ಷಗಳಿಂದ ಬೆಲೆ ಹೆಚ್ಚಳ ಮಾಡದಿರುವುದು. ಚಾಲಕರು ಕಂಗಲಾಗುವಂತಾಗಿದೆ. ಆಟೋರಿಕ್ಷಾ ಬಾಡಿಗೆ ಆಧಾರಿಸಿ ಬದುಕು ಸವೆಸುತ್ತಿರುವ ಕುಟುಂಬ ಬಸವಳಿಯುವಂತಾಗಿದೆ ಎಂದು ಆಟೋ ರಿಕ್ಷಾ ಒಕ್ಕೂಟದ ಸದಸ್ಯರು ಸರ್ಕಾರಕ್ಕೆ ತಮ್ಮ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಕಳೆದ ೮ ವರ್ಷಗಳ ಅವಧಿಯಲ್ಲಿ ಗ್ಯಾಸ್, ಬಸ್ ಪ್ರಯಾಣ ದರ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ ಆಟೋ ದರ ಹೆಚ್ಚಳ ಮಾಡದೆ ಸಾರಿಗೆ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂಬುದು ಆಟೋ ಚಾಲಕರ ಅಳಲು.
ಆಟೋ ರಿಕ್ಷಾ ಒಕ್ಕೂಟಗಳು ದರ ಏರಿಕೆಗೆ ಮನವಿ ಮಾಡಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲುರವರು ತಿಳಿಸಿದ್ದಾರೆ.
ವಾಣಿಜ್ಯ ಬಳಕೆ ಸಿಲಿಂಡರ್ ೪೩ ರೂ. ಹೆಚ್ಚಳ
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಎಲ್‌ಪಿಜಿ ಗ್ಯಾಸ್ ವಾಣಿಜ್ಯ ಬಳಕೆದಾರರಿಗೆ ಶಾಕ್ ನೀಡಿವೆ. ಪ್ರತಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ೪೩.೫ ಪೈಸೆಯಷ್ಟು ಹೆಚ್ಚಳ ಮಾಡಿದೆ.
ಪ್ರತಿ ತಿಂಗಳಿಗೊಮ್ಮೆ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತಿದ್ದು, ಗೃಹ ಬಳಕೆಯ ಸಿಲಿಂಡರ್ ದರವನ್ನು ಹೆಚ್ಚಳ ಮಾಡಿಲ್ಲ.
ಅಕ್ಟೋಬರ್ ಮೊದಲ ವಾರದಲ್ಲೇ ಹಣ ದುಬ್ಬರದಲ್ಲಿ ಹಿನ್ನೆಡೆ ಉಂಟಾದ ಕಾರಣ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಹೆಚ್ಚಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ ೧೯ ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಹೆಚ್ಚಳ ಮಾಡಲಾಗಿದೆ. ಈ ದರ ಏರಿಕೆಯಿಂದಾಗಿ ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಪ್ರತಿ ಸಿಲಿಂಡರ್ ದರ ೧೬೯೩ ರೂ.ಗಳಿಂದ ೧,೭೩೬.೫ ಪೈಸೆಗೆ ಹೆಚ್ಚಳವಾಗಿದೆ.
ಕಳೆದ ತಿಂಗಳು ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್ ದರವನ್ನು ೨೫ ರೂ.ಗಳಿಗೆ ಹೆಚ್ಚಿಸಿದ್ದವು. ಆದರೆ, ಇಂದು ಸಬ್ಸಿಡಿ ರಹಿತ ಸಿಲಿಂಡರ್‌ಗಳ ದರವನ್ನು ಹೆಚ್ಚಳ ಮಾಡಿಲ್ಲ. ಹೀಗಾಗಿ ಗ್ರಾಹಕರು ನಿರಾಳರಾಗಿದ್ದಾರೆ.