ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ 243 ವಾರ್ಡ್ ರಚನೆ: ಮಂಜುನಾಥ್ ಪ್ರಸಾದ್

ಬೆಂಗಳೂರು, ಜ.11-ಬೆಂಗಳೂರಿಗೆ ಹೊಸ ಕಾಯ್ದೆ ಜಾರಿ ಸಂಬಂಧ ಶೀಘ್ರದಲ್ಲಿಯೇ 243 ವಾರ್ಡ್ ರಚಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ತಿಳಿಸಿದರು.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಕ್ಕೆ ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡುವ ಬಗ್ಗೆ ವಾರ್ಡ್ ಪುನರ್ ರಚನೆ ಸಮಿತಿ ಸರ್ಕಾರ ನೀಡುವ ಕಾಲಾವಧಿಯೊಳಗೆ ವಾರ್ಡ್ ಪುನರ್ ರಚನೆ ಮಾಡಿ, ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಇನ್ನು, ಕಾಯ್ದೆ ಪ್ರಕಾರ ಕನಿಷ್ಟ 225, ಗರಿಷ್ಟ 251 ವಾರ್ಡ್ ಇರಬಹುದಾಗಿದೆ.

ಆದರೆ, 243 ವಾರ್ಡ್‌ಗಳನ್ನು ಮಾಡಲು ನಿರ್ಧರಿಸಲಾಗಿದೆ. ಪಾಲಿಕೆ ಗಡಿಯಿಂದ ಒಂದು ಕಿ.ಮೀ ವ್ಯಾಪ್ತಿಯ ಹೊಸ ಪ್ರದೇಶವನ್ನೂ ಸೇರಿಸಲಾಗುವುದು. ಹೊಸ ಪ್ರದೇಶಗಳನ್ನೂ ಸೇರಿಸಿದ ಬಳಿಕ ಒಟ್ಟು ಎಷ್ಟು ಜನಸಂಖ್ಯೆ ಇರುತ್ತದೆಯೋ, ಆ ಜನಸಂಖ್ಯೆಯನ್ನು ಸಮಾನವಾಗಿ ಇರುವಂತೆ ವಾರ್ಡ್ ಮರುವಿಂಗಡನೆ ಮಾಡಲಾಗುವುದು ಎಂದು ವಿವರಿಸಿದರು.

ಮತ್ತೊಂದೆಡೆ ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ 8 ವಲಯಗಳಿವೆ. ಇದನ್ನು ಗರಿಷ್ಠ 15 ವಲಯಗಳನ್ನಾಗಿಯೂ ಮಾಡಬಹುದಾಗಿದೆ. ಎಷ್ಟು ವಲಯಗಳಿರಬೇಕೆಂದು ನಿರ್ಧರಿಸಲು ಝೋನಲ್ ಡಿಮಾರ್ಕೇಶನ್ ಕಮಿಷನ್ ರಚನೆ ಮಾಡುವ ಅವಕಾಶ ಕಾಯ್ದೆಯಲ್ಲಿದೆ. ಇದನ್ನು ರಚನೆ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಲಿದ್ದೇವೆ ಎಂದು ತಿಳಿಸಿದರು.

ಕೆಎಂಸಿ ಕಾಯ್ದೆಯ, ಜಾಹಿರಾತು ಬೈಲಾದಲ್ಲಿ ನಗರದಲ್ಲಿ ನಿಷೇಧವಾಗಿದ್ದ ಜಾಹಿರಾತು ಪ್ರದರ್ಶನವನ್ನು ಮತ್ತೆ ತರಲು ಬಿಬಿಎಂಪಿ ಮುಂದಾಗಿದೆ. ಈ ಬಗ್ಗೆ ಸುಳಿವು ನೀಡಿದ ಆಯುಕ್ತರು, ಹೊಸ ಕಾಯ್ದೆ ಜಾಹಿರಾತಿಗೆ ಅನುಮತಿ ನೀಡಿರುವುದರಿಂದ ಬೈಲಾವನ್ನು ತಿದ್ದುಪಡಿ ಮಾಡಬೇಕಿದೆ ಎಂದರು.

ನೇಮಕ: ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿರುವ ವಾರ್ಡ್ ಕಮಿಟಿಗಳಲ್ಲಿ ಇಬ್ಬರು ಪರಿಶಿಷ್ಠ ಜಾತಿ, ಪಂಗಡದವರು, 3 ಜನ ಮಹಿಳೆಯರು, ಇಬ್ಬರು ಸ್ಥಳೀಯ ನಾಗರಿಕರ ಕಲ್ಯಾಣ ಸಂಘದ ಸದಸ್ಯರು ಇರಬೇಕೆಂದಿದೆ. ಇವರೆಲ್ಲರನ್ನು ಮುಖ್ಯ ಆಯುಕ್ತರು ನೇಮಿಸುತ್ತಾರೆ ಎಂದು ಕಾಯ್ದೆಯಲ್ಲಿದೆ. ಈ ಹಿಂದೆ ಕೆಎಂಸಿ ಕಾಯ್ದೆಯಲ್ಲಿ ಪಾಲಿಕೆ ನೇಮಕ ಎಂದಿತ್ತು. ಈಗ ಮುಖ್ಯ ಆಯುಕ್ತರು ನೇಮಕ ಮಾಡುತ್ತಾರೆ ಎನ್ನುವ ಅಂಶ ಇದೆ ಎಂದು ವಿವರಿಸಿದರು.

ಪಾಲಿಕೆಗೆ ಪ್ರತ್ಯೇಕ ಕಾಯ್ದೆ ಬೇಕೆಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಸರ್ಕಾರದ ಎರಡೂ ಸದನಗಳಲ್ಲಿ ಅನುಮೋದನೆಗೊಂಡು ರಾಜ್ಯಪಾಲರ ಅಂಕಿತವನ್ನೂ ಪಡೆದ ಬಳಿಕ ಇಂದಿನಿಂದ ಹೊಸ ಕಾಯ್ದೆ ಜಾರಿಗೆ ತರಲು ಸರ್ಕಾರ ಆದೇಶಿಸಿದೆ. ಹೊಸ ಕಾಯ್ದೆ ಇಂದಿನಿಂದ ಜಾರಿಗೆ ಬರುತ್ತಿರುವುದರಿಂದ ಅನೇಕ ಕೆಲಸಗಳನ್ನು ಇನ್ನು ಮುಂದೆ ಮಾಡಲಿದ್ದೇವೆ ಎಂದು ಆಯುಕ್ತರ ನುಡಿದರು.