ಅಥಣಿ : ಸೆ.27:ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವಿಭಾಗದಲ್ಲಿ ಎರಡು ಹೊಸ ಯಂತ್ರಗಳನ್ನು ಅಳವಡಿಸಲಾಗಿದ್ದು, ಅವುಗಳಿಗೆ ಶಾಸಕ ಲಕ್ಷ್ಮಣ್ ಸವದಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೀಡ್ನಿ ಸಮಸ್ಯೆ ಹೊಂದಿರುವ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಒದ್ದಾಡುವ ಪರಿಸ್ಥಿತಿಯನ್ನ ಅವಲೋಕಿಸಿ ಈ ವ್ಯವಸ್ಥೆ ಮಾಡಲಾಗಿದೆ. ಇದು ಉಚಿತ ಸೇವೆ ಇರುವುದರಿಂದ ಬಡತನದ ಕುಟುಂಬದ ರೋಗಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಅಥಣಿ ಸಾರ್ವಜನಿಕ ಆಸ್ಪತ್ರೆಯನ್ನು ರಾಜ್ಯದಲ್ಲಿಯೇ ಮಾದರಿ ಆಸ್ಪತ್ರೆಯನ್ನಾಗಿ ರೂಪಿಸುವ ಸಂಕಲ್ಪ ಹೊಂದಿದ್ದೇನೆ. ಖಾಸಗಿ ಆಸ್ಪತ್ರೆಗಳಷ್ಟೇ ಸರಿಸಮನಾದ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ದೊರಕಬೇಕು. ಶೀಘ್ರದಲ್ಲಿ ಸಿಟಿ ಸ್ಕ್ಯಾನ್ ಪ್ರಾರಂಭಿಸಲಾಗುವುದು. ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ಬರುವುದರಿಂದ ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿಗಳು ರೋಗಿಗಳಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿ ಇರುವ ಹಳೆಯ ತಹಸೀಲ್ದಾರ್ ಕಚೇರಿಯ ಕಟ್ಟಡದಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಅದಕ್ಕೆ ಅಗತ್ಯವಿರುವ ಸ್ಥಳವನ್ನು ಕಂದಾಯ ಇಲಾಖೆಯಿಂದ ಆರೋಗ್ಯ ಇಲಾಖೆಗೆ ಹಸ್ತಾಂತರಿಸಬೇಕೆಂದು ಸ್ಥಳದಲ್ಲಿಯೇ ಇದ್ದ ಚಿಕ್ಕೋಡಿ ಎಸಿ ಮಾಧವ್ ಗಿತ್ತೆ ಹಾಗೂ ತಹಶೀಲ್ದಾರ ರಾಜೇಶ್ ಬುರ್ಲಿ ಅವರಿಗೆ ಸೂಚನೆ ನೀಡಿದರು.
ಈ ವೇಳೆ ತಾಲೂಕಾ ವೈದ್ಯಾಧಿಕಾರಿ ಡಾ ಬಸಗೌಡಾ ಕಾಗೆ ಮಾತನಾಡಿ ಶಾಸಕರಾದ ಲಕ್ಷ್ಮಣ ಸವದಿ ಅವರು ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡುತ್ತಿದ್ದಾರೆ, ಈ ಮೂದಲು ಎರಡು ಡಯಾಲಿಸಿಸ್ ಯಂತ್ರಗಳನ್ನ ಕೊಟ್ಟಿದ್ದರು ಒಟ್ಟು ನಾಲ್ಕು ಯಂತ್ರಗಳನ್ನ ನೀಡಿದ್ದಾರೆ. ಆಸ್ಪತ್ರೆಯು ಹೆರಿಗೆ ವಿಭಾಗದಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದು ತಿಂಗಳಿಗೆ ಮೂರು ನೂರಕ್ಕೂ ಅಧಿಕ ಹೆರಿಗೆ ಆಗುತ್ತಿವೆ. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು,
ಈ ವೇಳೆ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ, ತಾಲೂಕಾ ವೈಧ್ಯಾಧಿಕಾರಿ ಡಾ.ಬಸಗೌಡ ಕಾಗೆ, ಡಾ.ಸಿ.ಎಸ್.ಪಾಟೀಲ ಪ್ರಕಾಶ ನರಟ್ಟಿ, ನವಿನ ಕಾತ್ರಾಳ, ತಾಲೂಕಾ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ, ಸುರೇಶ ವಾಲೀಕರ. ಮಾಣಿಕ ಶೆಟ್ಟಿ, ರಮೇಶ ಸಜ್ಜನ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.