ಶಿಸ್ತುಬದ್ಧ ಜೀವನ ನಿರ್ಮಾಣಕ್ಕೆ ಎನ್.ಎಸ್.ಎಸ್ ಪೂರಕ

ಕಲಬುರಗಿ.ಸೆ.16: ಇಂದಿನ ವಿದ್ಯಾರ್ಥಿಗಳೇ ನಾಳಿನ ನಾಗರಿಕರಾಗಿರುವದರಿಂದ, ವಿದ್ಯಾರ್ಥಿ ದೆಸೆಯಿಂದಲೆ, ಶಿಸ್ತು, ರಾಷ್ಟ್ರೀಯ ಪ್ರಜ್ಞೆ, ಮಾನವೀಯ ಹಾಗೂ ನೈತಿಕ ಮೌಲ್ಯಗಳು, ಸಮಯಪ್ರಜ್ಞೆ, ಬದ್ದತೆ, ಜವಾಬ್ದಾರಿ, ಪ್ರಾಮಾಣಿಕತೆ, ನಿಶ್ಚಿತ ಗುರಿ, ನಿರಂತರ ಪ್ರಯತ್ನದಂತಹ ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಇಂತಹ ಗುಣಗಳನ್ನು ಬೆಳೆಸಿ ಭವಿಷ್ಯದಲ್ಲಿ ಶ್ರೇಷ್ಠ ನಾಯಕರಾಗಲು ಎನ್.ಎಸ್.ಎಸ್ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ನರೇಂದ್ರ ಬಡಶೇಷಿ ಅಭಿಮತ ವ್ಯಕ್ತಪಡಿಸಿದರು.
ನಗರದ ಸ್ಟೇಷನ್ ಬಜಾರ ಪ್ರದೇಶದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಜರುಗುತ್ತಿರುವ ವಿಶೇಷ ಶಿಬಿರದ ಐದನೇ ದಿನವಾದ ಶುಕ್ರವಾರ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
‘ಸ್ವಾವಲಂಬನೆ ಬದುಕಿಗೆ ಸ್ವಯಂ ಉದ್ಯೋಗ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಜೇವರ್ಗಿಯ ಸರ್ಕಾರಿ ಪಿಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಸರ್ಕಾರ ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ಹುದ್ದೆಗಳ ಸಂಖ್ಯೆ ಕಡಿಮೆಯಿದ್ದು, ಆಕಾಂಕ್ಷಿಗಳ ಸಂಖ್ಯೆ ಅತಿ ಹೆಚ್ಚಾಗಿದೆ. ಆದ್ದರಿಂದ ಸೂಕ್ತ ಜ್ಞಾನ, ಮಾಹಿತಿ ಪಡೆದು ಸ್ವಯಂ ಉದ್ಯೋಗವನ್ನು ಮಾಡಬೇಕು. ಇದರಿಂದ ನಿರುದ್ಯೋಗದ ಪ್ರಮಾಣ ಕಡಿಮೆಯಾಗುತ್ತದೆ, ತಲಾ ವರಮಾನ, ರಾಷ್ಟ್ರೀಯ ವರಮಾನ ಹೆಚ್ಚಾಗುತ್ತದೆ. ಪ್ರಾದೇಶಿಕ ಅಸಮತೋಲನೆ ನಿವಾರಣೆಯಾಗುತ್ತದೆ. ಜನಸಾಂಧ್ರತೆ ತಪ್ಪುತ್ತದೆ. ಮುದ್ರಾ ಯೋಜನೆ, ಸ್ಟಾರ್ಟ್-ಅಪ್ ಇಂಡಿಯಾ, ಸ್ಟಾಂಡ್-ಅಪ್ ಇಂಡಿಯಾ, ಜನಧನ ಯೋಜನೆ, ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ನಿರುದ್ಯೋಗ ನಿವಾರಿಸಲು, ಸ್ವಯಂ ಉದ್ಯೋಗಕ್ಕಾಗಿರುವ ಯೋಜನೆಗಳಾಗಿದ್ದು, ಇವುಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ವಿವರಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಸುನೀತಾ ಬಿರಾದಾರ, ಉಪನ್ಯಾಸಕರಾದ ಬಲರಾಮ ಲೋಕುಚವ್ಹಾಣ, ಶ್ರೀಶೈಲ್ ಖುರ್ದ್, ಸಿದ್ದಲಿಂಗಪ್ಪ ಪೂಜಾರಿ, ಎನ್.ಎಸ್.ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ ದೊಡ್ಡಮನಿ, ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಪಾಂಡು ರಾಠೋಡ್, ಕ.ರಾ.ಪ್ರಾ.ಶಾ.ಶಿ.ಸಂಘದ ಜಿಲ್ಲಾ ಉಪಾಧ್ಯಕ್ಷ ದೇವೇಂದ್ರಪ್ಪ ಗಣಮುಖಿ ಸೇರಿದಂತೆ ಮತ್ತಿತರರಿದ್ದರು.
ಸ್ವಯಂ ಸೇವಕರಾದ ರಾಹುಲ್ ಸ್ವಾಗತಿಸಿದರು. ಯುವರಾಜ ನಿರೂಪಿಸಿದರು. ಬೀರಲಿಂಗ್ ವಂದಿಸಿದರು.