ಶಿಸ್ತುಬದ್ಧ ಜೀವನಕ್ಕೆ ಯೋಜನಾಬದ್ಧ ಹೂಡಿಕೆ ಅಗತ್ಯ

ಕಲಬುರಗಿ:ಅ.30: ಯಾವುದೇ ಒಬ್ಬ ವ್ಯಕ್ತಿ ಎಷ್ಟು ಆದಾಯ ಗಳಿಸುತ್ತಾನೆಂಬುದು ಮುಖ್ಯವಲ್ಲ. ತಾನು ಗಳಿಸಿದ ಆದಾಯದಲ್ಲಿ ಮಿತವ್ಯಯವಾಗಿ ಅವಶ್ಯಕತೆಯಷ್ಟೆ ವೆಚ್ಚ ಮಾಡಿ, ಎಷ್ಟು ಉಳಿತಾಯ ಮಾಡಿದ್ದಾನೆಂಬುದು ಪ್ರಮುಖವಾಗುತ್ತದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಅನಾವಶ್ಯಕ ಖರ್ಚು ಮಾಡುವುದು ಬಿಟ್ಟು, ಗಳಿಕೆಯ ಕನಿಷ್ಠ ಶೇ.20ರಷ್ಟಾದರೂ ಸರ್ಕಾರ ಅಥವಾ ಅಧಿಕೃತ ಸಂಸ್ಥೆಯಲ್ಲಿ ಸುರಕ್ಷತೆಯ ಖಾತ್ರಿಯೊಂದಿಗೆ ಹೂಡಿಕೆ, ಉಳಿತಾಯ ಮಾಡಬೇಕು. ಹೀಗೆ ಯೋಜನಾ ಬದ್ಧವಾದ ಹೂಡಿಕೆ, ಉಳಿತಾಯವು ಶಿಸ್ತುಬದ್ಧವಾದ ಜೀವನವನ್ನು ರೂಪಿಸುತ್ತದೆಯೆಂದು ಹಿರಿಯ ಪೋಸ್ಟಲ್ ಏಜೆಂಟ್ ಸಂಗಮೇಶ ಸರಡಗಿ ಹೇಳಿದರು.
ಅವರು ‘ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ‘ಕೆಎಚ್‍ಬಿ ಗ್ರೀನ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ’ದ ಜಂಟಿ ಆಶ್ರಯದಲ್ಲಿ ನಗರದ ಆಳಂದ ರಸ್ತೆಯ ಕೆಎಚ್‍ಬಿ ಗ್ರೀನ್ ಪಾರ್ಕನಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಶ್ವ ಮಿತವ್ಯಯ(ಉಳಿತಾಯ) ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಣ್ಣ ಉಳಿತಾಯವು ಇಳೆ ವಯಸ್ಸಿನಲ್ಲಿ ತುಂಬಾ ಸಹಕಾರಿಯಾಗುತ್ತದೆ. ಈಗಿನ ಯುವ ಜನತೆ ಅನಾವಶ್ಯಕವಾಗಿ ಖರ್ಚು ಮಾಡಿ, ಮುಂದೆ ತಮ್ಮ ಜೀವನದಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ. ಹಣವನ್ನು ಉಳಿಸಿದರೆ, ಅದು ನಮ್ಮನ್ನು ಉಳಿಸುತ್ತದೆ. ಅಂಚೆ ಇಲಾಖೆಯಲ್ಲಿ ಹೆಚ್ಚಿನ ಬಡ್ಡಿ ದೊರೆಯುವದರ ಜೊತೆಗೆ ಹೆಚ್ಚು ಸುರಕ್ಷತೆಯಿದೆ. ‘ಸುಕನ್ಯಾ ಅಭಿವೃದ್ಧಿ ಯೋಜನೆ’, ‘ಆರ್.ಡಿ ಯೋಜನೆ’, ‘ಹಿರಿಯ ನಾಗರಿಕರ ಉಳಿತಾಯ ಯೋಜನೆ’, ‘ಮಾಸಿಕ ಆದಾಯ ಯೋಜನೆ’ ಸೇರಿದಂತೆ ಉಳಿತಾಯ, ಹೂಡಿಕೆಯ ಅನೇಕ ಯೋಜನೆಗಳಿವೆ. ಅವುಗಳ ಬಗ್ಗೆ ತಿಳಿದುಕೊಂಡು, ಅದರಲ್ಲಿ ಹೂಡಿಕೆ, ಉಳಿತಾಯ ಮಾಡುವುದು ಅಗತ್ಯವಾಗಿದೆಯೆಂದರು.
ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ದೇಶದ ಮಾರುಕಟ್ಟೆಗೆ ನಿರಂತರ ಬಂಡವಾಳದ ಚಲನೆಯಿಂದಾಗಿ ಕೊಳ್ಳುಬಾಕ ಸಂಸ್ಕøತಿ ಹೆಚ್ಚಾಗಿ, ಹಣದುಬ್ಬರ ಉಂಟಾಗುತ್ತಿದೆ. ಆಗ ಅರ್ಥವ್ಯವಸ್ಥೆಯಲ್ಲಿ ಅಸ್ಥಿರತೆ ಉಂಟಾಗಿ ಪ್ರಗತಿ ಕುಂಠಿತವಾಗುತ್ತದೆ. ಆದ್ದರಿಂದ ಆರ್ಥಿಕ ಸ್ಥಿರತೆ ಹಾಗೂ ಪ್ರಗತಿಗೆ ಪೂರಕವಾಗಲು ಉಳಿತಾಯ ಅಗತ್ಯವಾಗಿದೆ. ‘ಇಂದಿನ ಉಳಿಕೆಯೇ, ನಾಳಿನ ಗಳಿಕೆ’ ಎಂಬ ಮಾತು ಉಳಿತಾಯದ ಮಹತ್ವವನ್ನು ಸಾರುತ್ತದೆ. ಜೀವನದ ಗುಣಮಟ್ಟವನ್ನು ಕಾಪಾಡಲು, ಆರ್ಥಿಕತೆಯನ್ನು ಭದ್ರಪಡಿಸಲು ಹಣವನ್ನು ಉಳಿತಾಯ ಮಾಡುವುದು ಅವಶ್ಯಕವಾಗಿದೆಯೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ, ಗೌರವ ಅಧ್ಯಕ್ಷ ನಾಗೇಂದ್ರಪ್ಪ ದಂಡೋತಿಕರ್, ಕಾರ್ಯದರ್ಶಿ ರಾಜೇಶ ನಾಗಬುಜಂಗೆ, ಸಂಘಟನಾ ಕಾರ್ಯದರ್ಶಿ ಚಂದ್ರಕಾಂತ ತಳವಾರ, ಖಜಾಂಚಿ ಡಿ.ವಿ.ಕುಲಕರ್ಣಿ, ಪ್ರಮುಖರಾದ ಮಲ್ಲಿನಾಥ ಮುನ್ನಳ್ಳಿ, ರಾಮದಾಸ ಪಾಟೀಲ, ವೀರೇಶ ಬೋಳಶೆಟ್ಟಿ ನರೋಣಾ, ಮಲ್ಲಿನಾಥ ಮಲ್ಲೆ, ರಾಜೇಶ ಇಟಗಿ, ರಾಮಲಿಂಗಪ್ಪ ಹರಸೂರ ಸೇರಿದಂತೆ ಹಲವರು ಭಾಗವಹಿಸಿದ್ದರು.