
ಕೆಂಭಾವಿ:ಮಾ.14:ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಶಿಸ್ತು, ಸ್ವಚ್ಛತೆ ಜೊತೆಯಲ್ಲಿ ಒಂದು ಭಾರತ ಶ್ರೇಷ್ಠ ಭಾರತದ ಕಲ್ಪನೆಯನ್ನು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ನಂದಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಸಿ.ಪಾಟೀಲ ಹೇಳಿದರು.
ಪಟ್ಟಣದ ಸಮೀಪ ಪರಸನಹಳ್ಳಿಯ ಸದಾನಂದ ಬಾಬಾ ದೇವಸ್ಥಾನದಲ್ಲಿ ಸುರಪುರದ ಶ್ರೀ ಜನನಿ ಮಹಿಳಾ ಪದವಿ ಮಹಾ ವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿರುವ 2022-23 ನೆ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಿಬಿರದಲ್ಲಿ ಕಲಿತಿರುವ ವಿಚಾರಗಳನ್ನು ಕೇವಲ ಶಿಬಿರಕ್ಕೆ ಸೀಮಿತಗೊಳಿಸದೆ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಇಲ್ಲಿನ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಾವಲ್ಲದೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಬದಲಾಯಿಸಬಹುದು ಎಂದು ತಿಳಿಸಿದರು.
ಉಪನ್ಯಾಸಕ ಹಾಗೂ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಬೀರಲಿಂಗ ದೇವತ್ಕಲ್ ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಪಾಲ್ಗೊಳ್ಳುವಂತಾಗಬೇಕು. ಎನ್‍ಎಸ್‍ಎಸ್‍ನಿಂದ ವಿದ್ಯಾರ್ಥಿಗಳಲ್ಲಿ ಬದ್ಧತೆ ಹೆಚ್ಚಾಗುತ್ತದೆ. ಭಾತೃತ್ವ, ರಾಷ್ಟ್ರೀಯತೆಯ ಕಲ್ಪನೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡುತ್ತದೆ ಎಂದು ತಿಳಿಸಿದರು.
ಕಿರಿಯ ಅಭಿಯಂತರ ಪ್ರವೀಣ ಕಟ್ಟಿಮನಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಟಿ-ಶರ್ಟ್ ಒದಗಿಸಿದರು. ಉಪನ್ಯಾಸಕ ಅಂಬರೀಷ ಪ್ರಾಸ್ತಾವಿಕ ಮಾತನಾಡಿದರು. ಪ್ರಾಶುಂಪಲೆ ಬಸವರಾಜೇಶ್ವರಿ ಘಂಟಿ, ಎನ್‍ಎಸ್‍ಎಸ್ ಅಧಿಕಾರಿ ಆದಿಶೇಷ ನೀಲಗಾರ, ಪುರಸಭೆ ಸದಸ್ಯ ಹಳ್ಳೆಪ್ಪ ಕವಲ್ದಾರ, ಉಪನ್ಯಾಸಕ ತಿರುಪತಿ ಕೆಂಭಾವಿ, ವೆಂಕಟೇಶ ಜಾಲಗಾರ, ಮಹೇಶ ಘಂಟಿ, ನಂದಿನಿ ಅತ್ತಗಳ್ಳಿ, ಶ್ರೀದೇವಿ ನಾಯಕ, ಶೃತಿಗೌಡ ಸೇರಿದಂತೆ ವಿದ್ಯಾರ್ಥಿಗಳಿದ್ದರು.
ಕುಮಾರಿ ಕಾವ್ಯಾ ಮತ್ತು ಚಂದ್ರಕಲಾ ನಿರೂಪಿಸಿದರು. ಕುಮಾರಿ ಮರೆಮ್ಮ ಸ್ವಾಗತಿಸಿದರು. ರೇಣುಕಾ ವಂದಿಸಿದರು.