ಶಿಷ್ಯಂದಿರು ಗುರುವಿಗಿಂತ ಹೆಚ್ಚಿನ ಸಾಧನೆ ಮಾಡಿದರೆ ನಿಜವಾದ ಗುರು ಕಾಣಿಕೆ ಸಮ: ಡಾ. ಆರುಣ ಇನಾಮದಾರ

ವಿಜಯಪುರ, ಡಿ. 26:ಶಿಷ್ಯಂದಿರು ತಮಗೆ ಕಲಿಸಿದ ಗುರುವಿಗಿಂತ ಹೆಚ್ಚಿನ ಸಾಧನೆ ಮಾಡಿದರೆ, ಅದೇ ಗುರುವಿಗೆ ನೀಡುವ ಮಹತ್ವದ ಗುರುಕಾಣಿಕೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಇನಾಮದಾರ ಹೇಳಿದ್ದಾರೆ.

ವಿವಿಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಹೊಸ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದ ಕಟ್ಟಡ ಸಭಾಂಗಣದಲ್ಲಿ ಶನಿವಾರ ನಡೆದ 1993ರಲ್ಲಿ ಎಂಬಿಬಿಎಸ್ ಪ್ರವೇಶಾತಿ ಪಡೆದ ಹಳೆಯ ವಿದ್ಯಾರ್ಥಿಗಳ 30ನೇ ವರ್ಷದ ಸ್ನೇಹ ಸಂಗಮ ಮತ್ತು ಗುರುವಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಫಲಾಪೇಕ್ಷೆ ಇಲ್ಲದೇ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸುದ ಗುರುಗಳಿಗಾಗಿ ಗುರುವಂದನೆ ಕಾರ್ಯಕ್ರಮ ಪ್ರಶಂಸನೀಯ. ಪ್ರತಿ ಸ್ನೇಹ ಸಂಗಮದಲ್ಲೂ ಒಂದೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಆಯೋಜಿಸಬೇಕು ಎಂದು ಅವರು ಸಲಹೆ ನೀಡಿದರು. ಅಲ್ಲದೇ, ವಿವಿ ಆವರಣದಲ್ಲಿ ಅಲುಮ್ನಿ ಹಾಲ್ ನಿರ್ಮಿಸುವ ಯೋಜನೆಯಿದ್ದು, ಹಳೆಯ ವಿದ್ಯಾರ್ಥಿಗಳೆಲ್ಲರೂ ಉದಾರಿಯಾಗಿ ದೇಣಿಗೆ ನೀಡಿ, ಯೋಜನೆಯ ಯಶಸ್ಸಿಗೆ ಸಹಕರಿಸುವಂತೆ ಡಾ. ಅರುಣ ಇನಾಮದಾರ ಕೋರಿದರು.

ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಡಾ. ಎಂ. ಬಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಒಳ್ಳೆಯ ಪಾಠ ಕಲಿಸಿರುವುದರಿಂದ ದೇವರು ವರ್ಷದಿಂದ ವರ್ಷಕ್ಕೆ ಕಾಲೇಜಿನ ಏಳ್ಗೆಯ ಮೂಲಕ ಆಶೀರ್ವದಿಸುತ್ತಿದ್ದಾನೆ. ದೇಶದ ಅತ್ಯುನ್ನತ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಬಿ. ಎಲ್. ಡಿ. ಇ ಯೂ ಒಂದಾಗಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ಹಿರಿಯ ಶಸ್ತ್ರ ಚಿಕಿತ್ಸಕ ಡಾ. ಬಿ. ಸಿ. ಉಪ್ಪಿನ, ತಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತ ವೈದ್ಯರಾಗಿರುವುದು ಸಂತೋಷದ ವಿಷಯ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಮತ್ತು ವಿಶ್ರಾಂತ ಉಪಕುಲಪತಿ ಡಾ. ಸತೀಶ.ಜಿಗಜಿನ್ನಿ ಮಾತನಾಡಿ, ಉನ್ನತ ಶಿಕ್ಷಣ ಪಡೆದ ಸುಶಿಕ್ಷಿತ ವೈದ್ಯರು ಸಾಮಾಜಿಕ ವಕಾಲತ್ತು ವಹಿಸಿ ಸಮಾಜದ ಸುರಕ್ಷತೆಗೆ ಕಾಣಿಕೆ ನೀಡಬೇಕು ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಡಾ. ಆರ್. ಸಿ. ಬಿದರಿ ಮಾತನಾಡಿ, ಮಾನವನ ಕಲಿಕೆ ನಿಂತ ನೀರಾಗದೆ, ಹರಿಯುವ ನದಿಯಂತೆ ಇರಬೇಕು. ನಿರಂತರ ವೈದ್ಯಕೀಯ ಕಲಿಕೆ ಸಮಾಜದ ಅಭ್ಯುದಯಕ್ಕೆ ಸಹಾಯ ಮಾಡುವಂತಿರಬೇಕು ಎಂದು ಹೇಳಿದರು.

ಹಳೆಯ ವಿದ್ಯಾರ್ಥಿಗಳಾದ ಡಾ. ವಿಜಯ ಕುಲಕರ್ಣಿ ಮತ್ತು ಡಾ. ಅರ್ಚನಾ ತಮ್ಮ ವೈದ್ಯಕೀಯ ವಿದ್ಯಾರ್ಥಿ ಜೀವನದ ಸವಿನೆನಪುಗಳನ್ನು ಮೆಲುಕು ಹಾಕಿದರು.

ಡಾ. ಶ್ರೀನಿವಾಸ, ವೈದ್ಯಕೀಯದಾಚೆಗಿನ ತಮ್ಮ ಯಶಸ್ವಿ ಬದುಕಿನ ಸೂತ್ರಗಳನ್ನು ತಿಳಿಸಿ, ಹವ್ಯಾಸಕ್ಕಾಗಿ ಫೆÇೀಟೊಗ್ರಾಫಿ, ಪರ್ವತಾರೋಹಣ, ಲೇಖನ ಬರೆಯುವ ತಾವು ಮಾನಸಿಕ ಮತ್ತು ದೈಹಿಕ ಕ್ಷೇಮತೆಯಿಂದ ಇರುವ ಹಿಂದಿನ ಗುಟ್ಟು ಎಂದು ಹೇಳಿದರು.

ಹಳೆಯ ವಿದ್ಯಾರ್ಥಿನಿ ಪುಣೆಯ ಡಾ. ಶಿಲ್ಪಾ ವಿಸೀದ ಅವರು ತಮ್ಮ ಸಹಪಾಠಿ ದಿವಂಗತ ಡಾ. ಸೈಯ್ಯದ ಫಯಾಜ್ ಪಾಶಾ ಅವರ ತುರ್ತು ಚಿಕಿತ್ಸಾ ವೈದ್ಯಕೀಯ ವಿಭಾಗದಲ್ಲಿನ ಕೊಡುಗೆಗಳ ಸ್ಮರಣಾರ್ಥವಾಗಿ ನಿಷ್ಠ – 93 ಬ್ಯಾಚಿನ ವಿದ್ಯಾರ್ಥಿಗಳು ಹೆಸರಿನಲ್ಲಿ ಆ ವಿಭಾಗದಲ್ಲಿ ಪ್ರತಿ ವರ್ಷ ಅತೀ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾಗುವ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗೆ ಚಿನ್ನದ ಪದಕ ನೀಡುವುದಾಗಿ ಘೋಷಿಸಿದರು. ಅಲ್ಲದೇ, ಡಾ. ಸೈಯ್ಯದ ಫಯಾಜ್ ಪಾಶಾ ಅವರು ಸೇವೆ ಸಲ್ಲಿಸಿದ ಪುಣೆಯ ಜಹಾಂಗೀರ್ ಆಸ್ಪತ್ರೆಯ ವತಿಯಿಂದ ಪ್ರತಿ ವರ್ಷ ಆ ವಿಭಾಗದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮದ ಪ್ರಾಯೋಜತ್ವ ವಹಿಸುವುದಾಗಿಯೂ ಅವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 30 ಜನ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಡಾ. ವಿಜಯ ಕಟ್ಟಿ, ಡಾ. ಪ್ರಕಾಶ ಪಾಟೀಲ, ಡಾ. ಸಂತೋಷ ಬಗಲಿ, ಡಾ. ಜಿ. ಎಸ್. ಪಲ್ಲೇದ, ಡಾ. ಬಾಲರಾಜು ಸೇರಿದಂತೆ ದೇಶ, ವಿದೇಶಗಳಲ್ಲಿ ನೆಲೆಸಿರುವ ಸುಮಾರು 70 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಿ.ಎಲ್.ಡಿ.ಇ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಸ್ವಾಗತಿಸಿದರು. ಡಾ. ಶಿಲ್ಪಾ ಉಪ್ಪಿನ ವಂದಿಸಿದರು. ಡಾ. ರವಿ.ಕುಲಕರ್ಣಿ, ಡಾ. ಅನಿತಾ, ಡಾ. ನಿರ್ಮಲಾ ನಿರೂಪಿಸಿದರು.