ಶಿಷ್ಠತೆಯ ರಕ್ಷಣೆಯ ಸಂಕೇತದ ಪಾಂಡವರ ಪೂಜೆ

ಕಲಬುರಗಿ:ನ.16: ದೀಪಾವಳಿಯು ಪ್ರಮುಖ ಹಬ್ಬವಾಗಿದ್ದು, ಅದರಲ್ಲಿ ಪಾಂಡವರ ಪೂಜೆಯು ಒಂದು ಉಪ ಆಚರಣೆಯಾಗಿದೆ. ಭೂಲೋಕಕ್ಕೆ ಕಂಟಕ ಪ್ರಾಯವಾಗಿದ್ದ ಜನತೆಯನ್ನು ಕಷ್ಟದ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದ ನಂದ ರಾಕ್ಷಸನನ್ನು ವಿಷ್ಣು ದೇವನು ಸಂಹರಿಸುತ್ತಾನೆ. ದುಷ್ಟತೆ ನಾಶ ಮಾಡಿ, ಶಿಷ್ಠತೆಯನ್ನು ರಕ್ಷಣೆಯ ಸಂಕೇತವಾಗಿ ಪಾಂಡವರ ಪೂಜೆಯನ್ನು ಮಾಡುವ ಪದ್ಧತಿಯಿದೆಯೆಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಅಭಿಪ್ರಾಯಪಟ್ಟರು.
ಅವರು ಆಳಂದ ತಾಲೂಕಿನ ಗುಂಜ ಬಬಲಾದ ಗ್ರಾಮದ ಬಸವಂತರಾವ ಸಿ.ಪಾಟೀಲ ಅವರ ಮನೆಯ ಪ್ರಾಂಗಣದಲ್ಲಿ ದೀಪಾವಳಿ ಬಲಿ ಪಾಡ್ಯಮಿ ಪ್ರಯುಕ್ತ ಸೋಮವಾರ ಕಜಾಪ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಜಾನಪದ ಗ್ರಾಮೀಣ ಸೊಗಡು’ ಕಾರ್ಯಕ್ರಮದಲ್ಲಿ ಪಾಂಡವರ ಪೂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ ಮಾತನಾಡಿ, ದೀಪಾವಳಿ ಅಮಾವಾಸ್ಯೆ ಮರುದಿವಸ ಪಾಡ್ಯದಂದು ಸೆಗಣಿಯಿಂದ ಪಾಂಡವರೆಂದು ಐದು ಮೂರ್ತಿಗಳನ್ನು ಮಾಡಿ, ಅದಕ್ಕೆ ಹೂಗಳಿಂದ ಅಲಂಕರಿಸಿ, ನೈವೇದ್ಯ ಸಮರ್ಪಿಸಿ, ಪೂಜೆಯನ್ನು ಸಲ್ಲಿಸಲಾಗುತ್ತದೆ. ಕಂಟಕಗಳು ದೂರವಾಗಿ, ಉತ್ತಮ ವಾತಾವರಣ ನೆಲೆಯೂರಲಿ ಎಂಬುದು ಇದರ ಹಿನ್ನಲೆಯ ನಂಬಿಕೆಯಾಗಿದೆ. ನಗರೀಕರಣದ ಭರಾಟೆಯಲ್ಲಿ ಇಂತಹ ಸಂಸ್ಕøತಿ, ಆಚರಣೆ, ಸಂಪ್ರದಾಯಗಳು ಮರೆಯಾಗುತ್ತಿವೆ. ಇದನ್ನು ಪರಿಚಯಿಸುವ ಉದ್ದೇಶದಿಂದ ಕಜಾಪ ಕಾರ್ಯಕ್ರಮ ಹಮ್ಮಿಕೊಂಡಿದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವಂತರಾವ ಸಿ.ಪಾಟೀಲ, ಶುಗಲಾಬಾಯಿ ಬಿ.ಪಾಟೀಲ, ಮಲ್ಲಿನಾಥ ಬಿ.ಪಾಟೀಲ, ಶಿವರಾಜ ಬಿ.ಪಾಟೀಲ, ಶರಣಬಸಮ್ಮ ಎಂ.ಪಾಟೀಲ, ಗುರುದೇವಿ ಎಸ್.ಪಾಟೀಲ, ರಾಜಕುಮಾರ ಪಾಟೀಲ, ಚನ್ನವೀರ, ಶಾಂತವೀರ, ಲೀಲಾವತಿ, ಶ್ರೀಶೈಲ್, ಚಿನ್ನಮ್ಮ, ಈಶ್ವರ ಸೇರಿದಂತೆ ಹಲವರಿದ್ದರು.