
ಕಲಬುರಗಿ,ಫೆ.26: ಜಾನಪದ ಎನ್ನುವುದು ಅಂತರಂಗದ ಶೋಧ. ಹೀಗಾಗಿ ಜಾನಪದ ಎಂದು ನಾಶವಾಗುವುದಿಲ್ಲ ಎಂದು ಡಾ. ಹನುಮಂತರಾವ ದೊಡ್ಡಮನಿ ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಭಾನುವಾರ ನಡೆದ ಜಾನಪದ ದರ್ಶನ ಗೋಷ್ಠಿ-11ರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನಪದ ಕಲಾವಿದರಿಗೆ ಕೇವಲ ಬಾಯಿ ಮಾತಿನ ಹೊಗಳಿಕೆ, ಇಲ್ಲವೇ ಹೆಸರಿಗೆ ಮಾತ್ರ ಗೌರವ ಕೊಟ್ಟರೆ ಸಾಲದು. ಅವರಿಗೆ ನಿಜವಾದ ಸ್ಥಾನಮಾನ ನೀಡಬೇಕು ಎಂದು ಹೇಳಿದರು.
ಶಿಷ್ಟ ಸಾಹಿತ್ಯಕ್ಕೆ ಜಾನಪದ ಸಾಹಿತ್ಯವೇ ತಾಯಿಬೇರು. ಜಾನಪದಕ್ಕೆ ಸಾವಿಲ್ಲ. ಆದರೆ ಜಾನಪದ ಕಲಾವಿದರಿಗೆ ಬೆಲೆ ಇಲ್ಲದಂತಾಗಿದೆ. ಜನಪದ ಸಾಹಿತ್ಯ ನಮ್ಮ ಬದುಕಿನ ಮಾರ್ಗವಾಗಿದೆ ಎಂದರು.
ಜಾನಪದ ಕಲೆ, ಕ್ರೀಡೆ, ಒಡಪು, ಶೋಭಾನ ಪದಗಳು, ಕಟ್ಟುವ, ಬೀಸುವ ಪದಗಳ ಸಂಗ್ರಹ ಹಾಗೂ ಬೆಳವಣಿಗೆ ಹಿನ್ನೆಲೆಯಲ್ಲಿ ಸಾಕಷ್ಟು ಕ್ಷೇತ್ರ ಕಾರ್ಯ ಆಗಬೇಕಿದೆ ಎಂದು ಅವರು ತಿಳಿಸಿದರು.
ಡಾ. ಚಂದ್ರಕಲಾ ಬಿದರಿ ಆಶಯ ಭಾಷಣ ಮಾಡಿದರು. ಮಹಿಳಾ ಜಾನಪದ ಕುರಿತು ಡಾ. ಜಗನ್ನಾಥ ಹೆಬ್ಬಾಳೆ, ಬುಡಕಟ್ಟು ಸಂಸ್ಕøತಿ ಕುರಿತು ಡಾ. ಚಿ.ಸಿ. ನಿಂಗಣ್ಣ, ಜಾನಪದ ಶೋಧ ಕುರಿತು ಡಾ. ಶರಣಪ್ಪ ಮಾಳಗೆ ಪ್ರಬಂಧ ಮಂಡಿಸಿದರು. ಡಾ. ಸುಮಂಗಲಾ ರೆಡ್ಡಿ ನಿರೂಪಿಸಿದರು. ಶೈಲಜಾ ಶರಣಗೌಡ ವಂದಿಸಿದರು.