ಶಿಷ್ಟ ಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ತಾಯಿ ಬೇರು:ಡಾ. ಗೌತಮ ಬಕ್ಕಪ್ಪ

ಬೀದರ: ಜ.2:ಜನಪದ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸ ಇದೆ ಶಿಷ್ಟ ಸಾಹಿತ್ಯಕ್ಕಿಂತ ಮೊಟ್ಟ ಮೊದಲ ಹುಟ್ಟಿಕೊಂಡಿರೋದು ಈ ಜನಪದ ಸಾಹಿತ್ಯ. ಶಿಷ್ಟ ಸಾಹಿತ್ಯ ಕವಿಯಿಂದ ಕವಿಗೆ ಹೊಟ್ಟಿಕೊಂಡರೆ ಜನಪದ ಸಾಹಿತ್ಯವು ಸಾಮಾನ್ಯ ಜನರ ಬಾಯಿಂದ ಬಾಯಿಗೆ ಹರಡಿ ಇಂದು ತನ್ನದೇ ಆದ ಛಾಪನ್ನು ಮೂಡಿಸಿದೆ ಜನಪದ ಸಾಹಿತ್ಯದಲ್ಲಿ ನಾವು ಅನೇಕ ಸಾಹಿತ್ಯದ ಪ್ರಕಾರಗಳನ್ನು ಕಾಣುತ್ತೇವೆ ಹಳ್ಳಿಗಳಲ್ಲಿ ಜನಪದ ಸಾಹಿತ್ಯ ಇನ್ನೂ ಕೂಡ ಜೀವಂತವಾಗಿದೆ. ಆದರೆ ಈ ಒಂದು ಆಧುನಿಕ ಯುಗದಿಂದ ಜನರು ಸಾಹಿತ್ಯವನ್ನೇ ಮರೆಯುತ್ತಿದ್ದಾರೆ ಹಳ್ಳಿಗಳಲ್ಲಿ ಕೂಡ ಮೊಬೈಲ್ ಬಂದಾಗಿನಿಂದ ಜನಪದವು ಮರೆಯಾಗುತ್ತಿದೆ ಎಂದು ಹೇಳಬಹುದು.. ಇಂದಿನ ಮಕ್ಕಳು ಜನಪದ ಎಂದರೇನು ಜಾನಪದದ ಪ್ರಕಾರಗಳು ಜಾನಪದ ಹೇಗೆ ಹುಟ್ಟಿಕೊಂಡಿತ್ತು ಅವುಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅವುಗಳನ್ನು ಉಳಿಸಿ ಬೆಳೆಸಲು ನಾವು ಪ್ರಯತ್ನ ಪಡಬೇಕು. ಅಂದಾಗ ಮಾತ್ರ ನಮ್ಮ ಜನಪದ ಸಂಸ್ಕøತಿ ಕಲೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಡಾ. ಗೌತಮ ಬಕ್ಕಪ್ಪ ನುಡಿದರು.
ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿ ಬೆಂಗಳೂರು, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಹಾಗೂ ತಾಲೂಕಾ ಘಟಕ ಬೀದರ ಇವರುಗಳ ಸಹಯೋಗದಲ್ಲಿ ತಾಲೂಕಿನ ಚಿಟ್ಟಾವಾಡ ಕಿತ್ತೂರ ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಗ್ರಾಮಲೋಕ ಜಾನಪದ ಸಾಹಿತ್ಯ, ಸಂಸ್ಕøತಿ, ಉಪನ್ಯಾಸ ಮತ್ತು ಗಾಯನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಲಿ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದರು.
ಕಾರ್ಯಕ್ರಮವನ್ನು ಜನಪದ ವಾದ್ಯ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದ ಹಿರಿಯ ಸಾಹಿತಿ ಶ್ರೀಮತಿ ಪುಣ್ಯವತಿ ವಿಸಾಜಿಯವರು ಮಾತನಾಡಿ “ಇಂದು ನಾವು ಜನಪದ ಸಂಸ್ಕøತಿಯನ್ನು ನೋಡಬೇಕಾದರೆ ಗ್ರಾಮಗಳ ಕಡೆಗೆ ಮುಖಮಾಡಬೇಕಾಗುತ್ತದೆ. ಗ್ರಾಮೀಣ ಪ್ರದೇಶದ ಜನರು ತಮ್ಮ ನೋವು ನಲಿವು, ಸಂತೋಷ-ಸುಖ, ಏಳು ಬೀಳು, ಇವುಗಳನ್ನು ಸಾಹಿತ್ಯದ ರೂಪದಲ್ಲಿ, ಸಂಗೀತದ ರೂಪದಲ್ಲಿ ಹಾಡುತ್ತ ಸಂಸ್ಕøತಿಯನ್ನು ಉಳಿಸಿದ್ದಾರೆ. ಭೂಮಿತಾಯಿ, ಗ್ರಾಮಗಳ ಸಂಸ್ಕøತಿ, ಬೆಳೆಗಳು, ಹಂತಿ ಹೊಡೆಯುವುದು, ತಾಯಿ-ಮಕ್ಕಳ ಸಂಬಂಧ, ವಿವಿಧ ಹಬ್ಬಗಳ ವರ್ಣನೆ, ಗ್ರಾಮೀಣ ಆಟಗಳು, ಆಚರಣೆಗಳ ಕುರಿತು ತಮ್ಮ ಜನಪದ ಹಾಡುಗಳಲ್ಲಿ ಹಿಡಿದಿಟ್ಟಿದ್ದಾರೆ. ಅವುಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆಂದು ತಿಳಿಸಿದರು.
ಹಿಂದಿನ ಕಾಲದಲ್ಲಿ ತಾಯಿಯಾದವಳು ಮಕ್ಕಳು ಎಷ್ಟೇ ಆಟವಾಡಿ ಬಂದರೂ ಅವರ ಕಾಲುಗಳನ್ನು ತೆಂಗಿನಕಾಯಿ ತಿಳಿನೀರಿನಿಂದ ತೊಳೆಯುವೆ ಎಂದು ಹೇಳುತ್ತಿದ್ದಳು. ಆದರೆ ಇಂದಿನ ತಾಯಿ ಮಕ್ಕಳು ಆಟವಾಡಲು ಹೊರಗೆ ಹೋದರೆ ನಿನ್ನ ಕಾಲು ಮುರಿಯುವೆ ಎಂದು ಹೇಳುತ್ತಿರುವಳು. ನಮ್ಮ ಭಾರತ ದೇಶ ಹಳ್ಳಿಗಳ ದೇಶ, ಹಬ್ಬ ಹರಿದಿನಗಳು ಆಚರಣೆ ಮಾಡುತ್ತೇವೆ. ಆ ಮಹದಾನಂದವನ್ನು ನಾವೆಲ್ಲರೂ ಅನುಭವಿಸಿ ದೇಶಿ ಸಂಸ್ಕøತಿಯನ್ನು ಉಳಿಸಲು ಪ್ರಯತ್ನಿಸಬೇಕೆಂದು ವಿಸಾಜಿಯವರು ತಿಳಿಸಿದರು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆಯವರು ಮಾತನಾಡಿ “ಜನಪದ ಸಾಹಿತ್ಯ, ಸಂಸ್ಕøತಿ, ಉಪನ್ಯಾಸ ಹಾಗೂ ಗಾಯನದ ಮುಖಾಂತರ ಶಾಲೆಗಳಲ್ಲಿ ಮಕ್ಕಳಿಗೆ ಗ್ರಾಮಲೋಕದ ಜನಪದ ಸಾಹಿತ್ಯದ ಹಿರಿಮೆ ಗರಿಮೆ ಹಾಗೂ ಸಂಸ್ಕøತಿ ಕುರಿತು ಮಾಹಿತಿ ನೀಡಲು ಕೇಂದ್ರ ಸಾಹಿತ್ಯ ಅಕಾಡೆಮಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿದೆ. ಹೀಗಾಗಿ ಕರ್ನಾಟಕ ಜಾನಪದ ಪರಿಷತ್ತಿನ ಸಹಕಾರದಲ್ಲಿ ನಮ್ಮ ನೆಲಮೂಲದ ಸಂಸ್ಕøತಿ, ಜನಪದ ಕಲಾವಿದರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯ ಮಾಡುತ್ತಿದೆ. ಕಳೆದ ಐದಾರು ವರ್ಷಗಳಲ್ಲಿ ಸಾವಿರಾರು ಕಲಾವಿದರನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಲ್ಚರಲ್ ಎಕ್ಸ್‍ಚೇಂಜ್ ಮೂಲಕ ಕಲೆಯನ್ನು ಪ್ರದರ್ಶನ ಮಾಡಲು ಪ್ರೋತ್ಸಾಹ ನೀಡಲಾಗಿದೆ ಎಂದು ತಿಳಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯರಾದ ಶ್ರೀ ಸುರೇಶ ಮಮಡೆಕರ್, ಜಂಟಿ ಕಾರ್ಯದರ್ಶಿ ಶಿವಶರಣಪ್ಪ ಗಣೇಶಪುರ, ರೇಣುಕಾ ಭಗವತಿ, ಸಂಗೀತಾ ಕಾಂಬಳೆ, ಪವನ ಬಾರೆ, ಶಾಂತಕುಮಾರ ಬಿರಾದಾರ, ಅಂಬಿಕಾ ಬಿರಾದಾರ, ಯಶವಂತ ಕುಚಬಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪರಿಷತ್ತಿನ ತಾಲೂಕಾಧ್ಯಕ್ಷ ಎಸ್.ಬಿ.ಕುಚಬಾಳ, ಸ್ವಾಗತಿಸಿದರು. ಕಿರಣ ವಲ್ಲೇಪುರೆ ನಿರೂಪಿಸಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಲ್ಲಮ್ಮ ಸಂತಾಜಿ ವಂದಿಸಿದರು.