ಶಿಷ್ಟಾಚಾರ ಪಾಲಿಸುವಂತೆ ಡಿಸಿ ಸೂಚನೆ


ಸಂಜೆವಾಣಿ ವಾರ್ತೆ

ಶಿವಮೊಗ್ಗ, ಅ.17; ಶಿಷ್ಟಾಚಾರ ನಿಯಮಾವಳಿ ಪ್ರಕಾರ ಸರ್ಕಾರಿ ಸಭೆ, ಸಮಾರಂಭಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಹಾಗೂ ಆಹ್ವಾನ ಪತ್ರಿಕೆ ಮುದ್ರಣ, ಆಸನ ವ್ಯವಸ್ಥೆ ಮತ್ತು ಶಿಲಾನ್ಯಾಸದಲ್ಲಿ ಶಿಷ್ಟಾಚಾರವನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣಲ್ಲಿ ಶಿಷ್ಟಾಚಾರ ಪಾಲನೆ ಕುರಿತು ಸೂಚನೆ ನೀಡಲು ಕರೆಯಲಾಗದಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಾಲ್ಲೂಕು ಮಟ್ಟದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗುತ್ತಿರುವ ಬಗ್ಗೆ ದೂರುಗಳಿವೆ. ಕೆಡಿಪಿ ಸಭೆಗಳಿಗೆ ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ನಾಮ ನಿರ್ದೇಶಿತ ಸದಸ್ಯರು ಸೇರಿದಂತೆ ಶಿಷ್ಟಾಚಾರದನ್ವಯ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು.2019 ರ ಏಪ್ರಿಲ್ 16 ಮತ್ತು 30 ರಂದು ಸರ್ಕಾರ ಆದ್ಯತೆಯ ಕ್ರಮ(ಆರ್ಡರ್ ಆಫ್ ಪ್ರಿಸಿಡೆನ್ಸ್)ಸುತ್ತೋಲೆ ಹೊರಡಿಸಿದ್ದು, ಅದರನ್ವಯ ಶಿಷ್ಟಾಚಾರ ಪಾಲನೆ ಮಾಡಬೇಕು. ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆಯಾಗುವ ಫಲಾನುಭವಿಗಳ ಪಟ್ಟಿಯನ್ನು ಅವರಿಗೆ ನೀಡಬೇಕು. ಸಭೆ, ಸಮಾರಂಭಗಳಿಗೆ 7 ದಿನಗಳ ಮುಂಚಿತವಾಗಿ ಆಹ್ವಾನ ನೀಡಬೇಕು. ವಿಳಂಬವಾದರೆ ಅದಕ್ಕೆ ಸಕಾರಣ ನೀಡಬೇಕು. ಅನವಶ್ಯಕ ವ್ಯಕ್ತಿಗಳಿಗೆ ವೇದಿಕೆಯಲ್ಲಿ ಅವಕಾಶ ನೀಡಬಾರದು. ಶಿಷ್ಟಾಚಾರ ಉಲ್ಲಂಘಿಸಿದರೆ ವಿಚಾರಣಾ ಸಮಿತಿ ಮುಂದೆ ಹಾಜರಾಗಬೇಕಾಗುತ್ತದೆ. ಆದ್ದರಿಂದ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಶಿಷ್ಟಾಚಾರವನ್ನು ಪಾಲಿಸಬೇಕು. ಹಾಗೂ ಅಧಿಕಾರಿಗಳು ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಬೇಕೆಂದರು.ಸಭೆಯಲ್ಲಿ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಅಪರ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಎಸಿ ಸತ್ಯನಾರಾಯಣ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.