ಶಿಷ್ಟಾಚಾರ ಗೊತ್ತಿಲ್ಲ;ಬಿಜೆಪಿ ವಿರುದ್ಧ ಡಿಕೆಶಿ ಗರಂ

ಬೆಂಗಳೂರು,ನ.೧೨- ಬಿಜೆಪಿ ಸರ್ಕಾರಕ್ಕೆ ಶಿಷ್ಟಾಚಾರ ಗೊತ್ತಿಲ್ಲ. ಬೇರೆ ಪಕ್ಷದ ನಾಯಕರುಗಳು ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ವೋಟ್ ಅಷ್ಟೆ. ಅದಕ್ಕೆ ಮಾಜಿ ಪ್ರಧಾನಿ ದೇವೇಗೌಡರನ್ನಾಗಲಿ, ನನ್ನನ್ನಾಗಲಿ ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣಕ್ಕೆ ಕರೆದಿಲ್ಲ, ಇದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಈ ಸರ್ಕಾರಕ್ಕೆ ಶಿಷ್ಟಾಚಾರ ಗೊತ್ತಿಲ್ಲ. ಆಚಾರ-ವಿಚಾರ ಎಲ್ಲ ಅವರಿಗೇ ಬಿಟ್ಟದ್ದು ಎಂದ ಅವರು, ಈ ಹಿಂದೆ ಈ ಪ್ರತಿಮೆಗೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ನನ್ನನ್ನು ಕರೆದಿದ್ದರು. ಆಗ ನಾನು ಹೋಗಿದ್ದೆ ಎಂದರು.ಬಿಜೆಪಿ ಸರ್ಕಾರ ಪಕ್ಷದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಕೆಂಪೇಗೌಡ ಎಂದು ಹೆಸರಿಟ್ಟಿದ್ದು ಕಾಂಗ್ರೆಸ್ ಸರ್ಕಾರ, ವಿಮಾನನಿಲ್ದಾಣ ನಿರ್ಮಾಣಕ್ಕೆ ೨ ಸಾವಿರ ಎಕರೆಯನ್ನು ರೈತರಿಂದ ಖರೀದಿ ಮಾಡಿಕೊಟ್ಟಿದ್ದೂ ಕಾಂಗ್ರೆಸ್ ಸರ್ಕಾರ, ಬಿಜೆಪಿ ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ಪ್ರಧಾನಿ ನರೇಂದ್ರಮೋದಿ ಅವರು ನಿನ್ನೆ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ದಾರೆ. ಒಳ್ಳೆಯದೇ, ಆದರೆ ಮಾಲಾರ್ಪಣೆ ಮಾಡುವುದರಿಂದ ಜನರ ಹೊಟ್ಟೆ ತುಂಬಲ್ಲ, ಜನರಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡಬೇಕು, ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ಸತ್ತವರಿಗೆ ಇನ್ನೂ ಹಣ ಕೊಟ್ಟಿಲ್ಲ. ಡಬಲ್ ಇಂಜಿನ್ ಸರ್ಕಾರ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು ಅದೂ ಆಗಿಲ್ಲ ಎಂದು ವ್ಯಂಗ್ಯವಾಡಿದರು.ಬಿಜೆಪಿಯವರಿಗೆ ಬೇಕಾಗಿರುವುದು ಚುನಾವಣೆ, ಮತ ಅಷ್ಟೆ, ಹಾಗಾಗಿ ಅದಕ್ಕೇ ಏನು ಬೇಕೋ ಅದನ್ನು ಮಾಡುತ್ತಿದ್ದಾರೆ. ಜನಕ್ಕೆ ಎಲ್ಲವೂ ಗೊತ್ತಿದೆ ಎಂದರು.ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕೆಂಪೇಗೌಡರ ಪುತ್ಥಳಿ ಮಾಡಿರುವುದು ಸಂತೋಷ, ಸರ್ಕಾರದ ದುಡ್ಡು ಖರ್ಚು ಮಾಡುವ ಬದಲು ವಿಮಾನನಿಲ್ದಾಣ ಪ್ರಾಧಿಕಾರದವರಿಗೆ ಹೇಳಿದ್ದರೆ ಅವರೇ ಪ್ರತಿಮೆ ಮಾಡುತ್ತಿದ್ದರು ಎಂದರು.