ಶಿಷ್ಟಾಚಾರ ಉಲ್ಲಂಘನೆ ಅಧಿಕಾರಿಗಳ ವಿರುದ್ದ ಕ್ರಮ

ಕೋಲಾರ ಸೆ,೧೭-ಕೆ.ಸಿ.ವ್ಯಾಲಿ ನೀರಿನಿಂದ ತುಂಬಿ ಕೋಡಿ ಬಿದ್ದಿರುವ ಎಸ್. ಅಗ್ರಹಾರ ಕೆರೆಯ ಬಾಗಿನ ಬಿಡುವ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು ಇವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಕರ್ನಾಟಕ ವಿಧಾನಸಭೆಯ ಹಕ್ಕು ಭಾದ್ಯತಾ ಸಮಿತಿಗೆ ದೂರು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ನಾಗೇಶ್ ತಿಳಿಸಿದರು.
ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಬಾಗಿನ ಕಾರ್ಯಕ್ರಮಕ್ಕೆ ನನಗೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಉಪವಿಬಾಗಾಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ಅಲ್ಲದೆ ಭಾನುವಾರ ರಜಾ ದಿನ ಕಾರ್ಯಕ್ರಮ ಹಮ್ಮಿಕೊಂಡು ಕೆಲವು ಅಧಿಕಾರಿಗಳು ಭಾಗವಹಿಸಿದ್ದಾರೆ. ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಲಾಗುವುದು ಎಂದು ತಿಳಿಸಿದರು.
ಕೆ.ಸಿ.ವ್ಯಾಲಿ ನೀರು ಗುರುತ್ವಾಕರ್ಷಣೆಗೆ ಅನುಗುಣವಾಗಿ ಕೆರೆಯಿಂದ ಕೆರೆಗೆ ಹರಿಯುತ್ತದೆ. ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ವೇಗವಾಗಿ ಕೆರೆಗಳು ತುಂಬುತ್ತಿವೆ. ಕೆ.ಸಿ. ವ್ಯಾಲಿ ಯೋಜನೆಯ ಎರಡನೇ ಹಂತದಲ್ಲಿ ಕೆರೆಗಳನ್ನು ತುಂಬಿಸಲು ಕೆರೆಗಳನ್ನು ಆಯ್ಕೆ ಮಾಡಲಾಗುತ್ತಿದೆ. ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಕೊಡಿಸಲು ಹಾಗೂ ಮಾಹಿತಿ ನೀಡಲು ಕೈಗಾರಿಕೆ ಇಲಾಖೆಯಲ್ಲಿ ಕೌಂಟರ್ ತೆಗೆಯಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರು ಖಾಲಿ ಇರುವೆಡೆ ತಾತ್ಕಾಲಿಕ ಉದ್ಯೋಗಗಳನ್ನು ಕೊಡಿಸುವಂತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಖಾಲಿ ಇರುವ ಹುದ್ದೆಯನ್ನು ನೀಡುವಂತೆ, ಕೋಲಾರ ನಗರಸಭೆಯ ವ್ಯಾಪ್ತಿಯಲ್ಲಿ ಒತ್ತುವರಿಗಳಾಗಿದ್ದು ಒತ್ತುವರಿ ತೆರವುಗೊಳಿಸುವಂತೆ ಮನವಿ ಸಲ್ಲಿಸಿದರು.
ಸಾರ್ವಜನಿಕರ ಮನವಿಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಿ ಪರಿಹರಿಸುವುದಾಗಿ ಸಚಿವರು ತಿಳಿಸಿದರು.