ಶಿಷ್ಟಾಚಾರ ಅನುಸಾರ ಅಧಿಕಾರಿಗಳ ನೇಮಕ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೮- ಬೇರೆ ರಾಜ್ಯದ ನಾಯಕರುಗಳು ರಾಜ್ಯಕ್ಕೆ ಬಂದಾಗ ಅವರ ಆತಿಥ್ಯಕ್ಕೆ ಐಎಎಸ್ ಅಧಿಕಾರಿಗಳನ್ನು ನೇಮಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಶಿಷ್ಟಾಚಾರದ ಪ್ರಕಾರವೇ ಐಎಎಸ್ ಅಧಿಕಾರಿಗಳನ್ನು ಹಿರಿಯ ನಾಯಕರುಗಳ ಆತಿಥ್ಯಕ್ಕೆ ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವುಕಮಾರ್ ಹೇಳಿದರು.ಬೆಂಗಳೂರಿನಲ್ಲಿ ಮಹಾಮೈತ್ರಿ ಘಟಕದ ಸಭೆ ನಡೆದ ಪಂಚತಾರ ಹೋಟೆಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಎಸ್ ಅಧಿಕಾರಿಗಳನ್ನು ರಾಜಕಾರಣಿಗಳ ಆತಿಥ್ಯಕ್ಕೆ ನಿಯುಕ್ತಿಗೊಳಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ನಾನು ಉತ್ತರ ಕೊಡಲು ತಯಾರಿಲ್ಲ. ಶಿಷ್ಟಾಚಾರದಂತೆ ಈ ಪದ್ಧತಿ ನಡೆದಿದೆ. ಶಿಷ್ಟಾಚಾರದ ಪ್ರಕಾರವೇ ಐಎಎಸ್ ಅಧಿಕಾರಿಗಳನ್ನು ಹಿರಿಯ ನಾಯಕರ ಸ್ವಾಗತಕ್ಕೆ ನಿಯುಕ್ತಿಗೊಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.ವಿರೋಧ ಪಕ್ಷಗಳ ನಾಯಕರುಗಳ ಸಭೆ ನಡೆಯುತ್ತಿದೆ. ಅವರಿಗೆ ಆಹ್ವಾನ ಕೊಟ್ಟಿಲ್ಲ. ಅವರು ಎನ್‌ಡಿಎ ಆಹ್ವಾನಕ್ಕೆ ಕಾಯುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಹಾಗಾಗಿ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ಅವರಿಗೂ ಸುದ್ದಿ ಬೇಕಲ್ಲವೇ ಎಂದು ವ್ಯಂಗ್ಯವಾಗಿ ಹೇಳಿದರು.ಬೆಂಗಳೂರಿನ ಕೆಲವೆಡೆ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರನ್ನು ಅಣಕಿಸುವ ಭಿತ್ತಿ ಪತ್ರವನ್ನು ಅಂಟಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸ್ನೇಹಿತರು ಈ ಭಿತ್ತಿಪತ್ರ ನಿತೀಶ್‌ಕುಮಾರ್ ಅವರು ತಮ್ಮ ರಾಜಕೀಯ ಮಾಡುತ್ತಿದ್ದಾರೆ. ಈ ಭಿತ್ತಿಪತ್ರಗಳನ್ನು ಅಂಟಿಸಿದವರು ಹೇಡಿಗಳು ಎಂದು ಟೀಕಿಸಿದರು.