ಶಿವಾನುಭವ ಚಿಂತನ

ಕೆಂಭಾವಿ:ಜ.1:ಗುರುಗಳನ್ನು ಬ್ರಹ್ಮ, ವಿಷ್ಣು, ಮಹೇಶ್ವರನಿಗೆ ಹೋಲಿಸಲಾಗಿದೆ. ಗುರಿ, ಉದ್ದೇಶ, ಧ್ಯೇಯಗಳಿಗಾಗಿ ಸನ್ಮಾರ್ಗವನ್ನು ತೋರುವವನೆ ನಿಜವಾದ ಗುರುವಾಗಿದ್ದಾನೆ ಎಂದು ಬಸಯ್ಯಸ್ವಾಮಿ ಸೋಮಶೇಖರ ಮಠ ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ನಡೆದ ಮಾಸಿಕ ಹುಣ್ಣಿಮೆ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಯಕ ನಿಷ್ಠೆ ಮತ್ತು ಗುರುವಿನ ಮಹತ್ವ ಕುರಿತು ಕೀರ್ತನೆ ನಡೆಸಿಕೊಟ್ಟ ಅವರು ಸಾಕ್ಷಾತ್ ಶಿವನಿಂದಲೂ ಕೂಡ ಮೋಕ್ಷ ಸಾಧನೆಯಾಗದು, ಗುರುವಿನ ಮುಖೇನ ಮಾತ್ರ ಮೋಕ್ಷ ಪ್ರಾಪ್ತಿ ಸಾಧ್ಯ. ಗುರುವಿನಲ್ಲಿ ಶಿಷ್ಯನೋದ್ದಾರದ ಕಳಕಳಿ ಶಿಷ್ಯನಲ್ಲಿ ಕಲಿಯುವ ತಳಮಳವಿದ್ದಾಗ ಮಾತ್ರ ಜ್ಞಾನ ದೊರಕುತ್ತದೆ ಎಂದ ಅವರು ನಮ್ಮ ಶರಣರು ನುಡಿದಂತೆ ನಿಷ್ಕಾಮ ಭಕ್ತಿಯಿಂದ ಭವ ಬಂಧನದಿಂದ ಮುಕ್ತಿಗೆ ದಾರಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರೇಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಸಾನಿಧ್ಯವಹಿಸಿ ಆಶೀರ್ವದನ ನೀಡಿದರು. ವಲಯ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಯಂಕನಗೌಡ ಪಾಟೀಲ್, ಸಾಹಿತಿ ನಿಂಗನಗೌಡ ದೇಸಾಯಿ, ಶರಣಯ್ಯ ಸ್ವಾಮಿ ಹಿರೂರ ಬಾಗವಹಿಸಿದ್ದರು. ಸಂಗೀತ ಶಿಕ್ಷಕರಾದ ಯಮನೇಶ ಯಾಳಗಿ, ಸೋಮಶೇಖರ ಸಂಗೀತ ಸೇವೆ ನೀಡಿದರು. ಮಹಾದೇವಪ್ಪ ವಜ್ಜಲ್, ನಿಜಗುಣಿ ಬಡಿಗೇರ, ಅಭಿಲಾಶ ಪಾಟೀಲ್, ಸಿದ್ದಣ್ಣ ಆಲಗೂರ ಸೇರಿದಂತೆ ಇತರರು ಇದ್ದರು,