ಶಿವಾನುಭವದಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳ ನುಡಿನಮನ

ಸಂಜೆವಾಣಿ ವಾರ್ತೆ,
ವಿಜಯಪುರ, ಡಿ.21:ಅಖಂಡವಾದ ಅದ್ಭುತ ಜ್ಞಾನ ಪ್ರವಚನಗಳ ಮೂಲಕ ನಿತ್ಯ ದಾಸೋಹದಿಂದ ಅಪಾರವಾದ ಪಾಂಡಿತ್ಯ ಪ್ರತಿಭೆಗಳ ಸದುವಿನಯದ ಮೃದು ನಡೆ ನುಡಿಗಳ, ತ್ಯಾಗ ವೈರಾಗ್ಯಗಳ, ಸರ್ವಧರ್ಮ ಸಮಭಾವಗಳ ನಿರ್ಲಿಪ್ತ ಜೀವನದ ಜ್ಞಾನ ಚಿಂತನೆಯಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳು ಎತ್ತರಕ್ಕೆ ಬೆಳೆದ ಮಹಾನ ಪುರುಷರು ಎಂದು ಸಾಹಿತಿ ಸುಭಾಷ ಯಾದವಾಡ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಾಂಸ್ಕøತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಶಿವಾನುಭವ ಭವನದಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ನುಡಿನಮನ ಕುರಿತು ಮಾತನಾಡಿ, ಜ್ಞಾನ ದಾಸೋಹ, ಅನ್ನದಾಸೋಹಗಳ ಜೊತೆಗೆ ವ್ಯಕ್ತಿಯ ಅಂತರಂಗದ ವಿಕಾಸಕ್ಕೆ ಕಾರಣವಾದ ಪ್ರವಚನಗಳು ಅದರಲ್ಲಿ ಶಿವಶರಣರ ಮತ್ತು ಸಂತರ ಜೀವನ ಸಂದೇಶಗಳನ್ನು ಮನಮುಟ್ಟುವಂತೆ ಹೇಳಿದ ಶ್ರೀಗಳು, ಶೂನ್ಯದಿಂದ ಬಂದು ಬಯಲಿನತ್ತ ನಡೆದ ಶ್ರೀಗಳು ಮಾದರಿ ಸೂಕ್ಷ್ಮತೆಯ ವ್ಯಕ್ತಿಯಾಗಿದ್ದರು ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಮಾತನಾಡಿ, ಜಾಗತಿಕ ಚಿಂತಕರ ಉದಾತ್ತ ಚಿಂತನೆಗಳಿಂದ ಭಗವಂತನ ಸ್ವರೂಪವನ್ನು ಪರಿಚಯಿಸುವ ಪ್ರವಚನಗಳು ಪ್ರಪಂಚಕ್ಕೆ ಮಾದರಿಯಾಗಿವೆ. ಶ್ರೀ ಸಿದ್ಧೇಶ್ವರ ಶ್ರೀಗಳ ವ್ಯಕ್ತಿತ್ವ ಅಲ್ಲಮಪ್ರಭುಗಳ ವ್ಯಕ್ತಿತ್ವ ದ್ವಿತೀಯ ಅಲ್ಲಮರು ಘಟಸ್ತಲ ಸಿದ್ಧಾಂತ, ಅರಿವಿನ ವಚನ, ವಿಜ್ಞಾನ, ವೈದಿಕ ತಂತ್ರ ಅರಿತವರಾಗಿದ್ದರು. ಅವರು ಎಲ್ಲದರಲ್ಲೂ ಜ್ಞಾನ ರತ್ನರು. ಅಂತಹ ಶ್ರೀಗಳು ಪ್ರಪಂಚಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಮಹಾನುಭಾವರ ಚಿಂತನೆಗಳ್ನು ಕೇಳುವುದರ ಮೂಲಕ ಬದುಕಿಗೆ ಆದರ್ಶಗಳನ್ನು ಅಳವಡಿಸಿಕೊಳ್ಳಬಹುದು. ತತ್ವವಾದಿಗಳಾಗಿ ಭಾರತೀಯ ಪರಂಪರೆಯನ್ನು ಅರಿತುಕೊಂಡವರು. ಅವರೊಬ್ಬ ಶತಮಾನದ ಸಂತರು. ಇದೊಂದು ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ಸಲ್ಲಿಸುವ ಪರಿಪೂರ್ಣ ನುಡಿನಮನ ಎಂದರು.
ಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳ ಕುರಿತು ಸಂಗಮೇಶ ಬದಾಮಿ ‘ಅನುಭಾವ ಚಿಂತನೆ’ ಎಂಬ ಕವಿತೆಯನ್ನು ಪ್ರಸ್ತುತಪಡಿಸಿದರು.
ಡಾ. ಸೋಮಶೇಖರ ವಾಲಿ ಸ್ವಾಗತಿಸಿದರು. ಬಿ.ಆರ್. ಬನಸೋಡೆ ವಚನಗೀತೆ ಹಾಡಿದರು. ಬಸವರಾಜ ವಂಟೆಗೂಡಿ ವಂದಿಸಿದರು. ಸಾಹಿತಿ ಸಂಗಮೇಶ ಬದಾಮಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಎಸ್.ವಾಯ್. ಗದಗ, ಬ್ಯಾಕೋಡ ದಂಪತಿಗಳು, ಎಮ್.ಜಿ. ಯಾದವಾಡ, ಎಸ್.ಜಿ. ನಾಡಗೌಡರ, ಮಹಾದೇವ ಹಾಲಳ್ಳಿ, ಕಸಬೇಗೌಡರ, ಪರಶುರಾಮ ಪೋಳ ಉಪಸ್ಥಿತರಿದ್ದರು. ನುಡಿನಮನದಲ್ಲಿ ಹಿರಿಯರು, ಶರಣರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.