ಶಿವಾನಿ ಸ್ವಾಮಿ ‘ಬೀದರ್ ಐಡಲ್’ ವಿಜೇತೆ

ಬೀದರ್;ಜ.6:ಬೀದರ್ ಉತ್ಸವದ ಅಂಗವಾಗಿ ಆಯೋಜಿಸಿದ್ದ ‘ಬೀದರ್ ಐಡಲ್’ ಗಾಯನ ಸ್ಪರ್ಧೆಯಲ್ಲಿ ಶಿವಾನಿ ಸ್ವಾಮಿ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಜಿಲ್ಲಾಡಳಿತ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಗುರುವಾರ ನಡೆದ ಸ್ಪರ್ಧೆಯ ಫೈನಲ್‍ನಲ್ಲಿ ಪಾಲ್ಗೊಂಡಿದ್ದ 10 ಸ್ಪಧಾಳುಗಳಲ್ಲಿ ಅವರು ಪ್ರಥಮ ಸ್ಥಾನ ಪಡೆದರೆ, ರಶ್ಮಿ ಸುಧೀರ್ ಶರ್ಮಾ ದ್ವಿತೀಯ ಹಾಗೂ ಅಂಜಲಿ ರಾಜಕುಮಾರ ತೃತೀಯ ಸ್ಥಾನ ಪಡೆದರು.

ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಜಿಲ್ಲೆಯ ವಿವಿಧೆಡೆಯ 202 ಸ್ಪರ್ಧಾಳುಗಳು ಭಾಗವಹಿಸಿದ್ದರು. ಇವರಲ್ಲಿ 41 ಸ್ಪರ್ಧಾಳುಗಳು ಸೆಮಿಫೈನಲ್‍ಗೆ ಆಯ್ಕೆಯಾಗಿದ್ದರು. ಸೆಮಿಫೈನಲ್‍ನಲ್ಲಿ 10 ಜನ ಗಾಯಕರು ಆಯ್ಕೆಯಾಗಿ, ಫೈನಲ್‍ಗೆ ಪ್ರವೇಶ ಪಡೆದಿದ್ದರು. ಫೈನಲ್‍ನಲ್ಲಿ ಸ್ಪರ್ಧಾಳುಗಳು ಕನ್ನಡ, ಹಿಂದಿ ಹಾಗೂ ಜನಪದ ಹಾಡುಗಳನ್ನು ಅತ್ಯುತ್ಸಾಹದಿಂದ ಹಾಡುವ ಮೂಲಕ ಸಭಿಕರ ಮನ ರಂಜಿಸಿದರು.
ಸ್ಪರ್ಧೆಯ ಅಂತಿಮ ಕಣದಲ್ಲಿ ರಶ್ಮಿ ಶರ್ಮಾ ಮತ್ತು ಅಂಜಲಿ ರಾಜಕುಮಾರ ಸಮ ಅಂಕಗಳನ್ನು ಪಡೆದ ಕಾರಣ ತೀರ್ಪುಗಾರರು ಇಬ್ಬರಿಗೂ ಮತ್ತೊಮ್ಮೆ ಹಾಡಲು ಅವಕಾಶ ನೀಡಿದರು. ರಶ್ಮಿ ಉತ್ತಮವಾಗಿ ಹಾಡಿ, ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು.
ಸ್ಪರ್ಧಾಳುಗಳು ‘ಆನೆಸೆ ಉಸಕಿ ಆಯೇ ಬಹಾರ’, ‘ಪಗ್ ಗುಂಗುರು ಬಾಂಧ ಮೀರಾ ನಾಚೀಥಿ’, ‘ಲಗಜಾ ಗಲೇ ಕೇ ಫೀರ್ ಎ ರಾತ ಹೋ ನಾ ಹೋ’ ಮೊದಲಾದ ಹಾಡುಗಳನ್ನು ಅದ್ಭುತವಾಗಿ ಹಾಡಿ ಎಲ್ಲರ ಗಮನ ಸೆಳೆದರು.

ಸಂಗೀತಗಾರ ರಾಜೇಂದ್ರ ಪವಾರ್, ಚಲನಚಿತ್ರ ಸಂಗೀತ ನಿರ್ದೇಶಕ ವೀರ ಸಮರ್ಥ, ಜನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ತೀರ್ಪುಗಾರರಾಗಿದ್ದರು.

ಫೈನಲ್ ಸ್ಪರ್ಧೆಯನ್ನು ಶಾಸಕ ರಹೀಂ ಖಾನ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ, ನಿರ್ದೇಶಕ ಮುನೇಶ್ವರ ಲಾಖಾ, ಸಪ್ನಾ ಗ್ರೂಪನ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಪಾಟೀಲ, ಹಿರಿಯ ಸಿವಿಲ್ ಎಂಜಿನಿಯರ್ ರವಿ ಮೂಲಗೆ ಇದ್ದರು.