ಶಿವಾನಂದ ಪಾಟೀಲರಿಗೆ ಡಿಸಿಎಂ ಸ್ಥಾನ:ಮನಗೂಳಿ ಶ್ರೀ ಆಗ್ರಹ

ವಿಜಯಪುರ,ಮೇ 19 : ಉತ್ತರ ಕರ್ನಾಟಕದವರಿಗೆ ಡಿಸಿಎಂ ಸ್ಥಾನ ಕೊಡಬೇಕು, ಈ ಎಲ್ಲ ಹುದ್ದೆಗಳು ದಕ್ಷಿಣ ಕರ್ನಾಟಕ ಭಾಗದವರಿಗೆ ಸೀಮಿತವೇ? ಈ ಹಿಂದಿನ ಸರ್ಕಾರದಲ್ಲಿರುವಂತೆ ಮೂರು ಡಿಸಿಎಂ ಹುದ್ದೆ ಸೃಜಿಸಬೇಕು ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವನ ಸ್ವಾಮೀಜಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕದವರಿಗೆ ಡಿಸಿಎಂ ಮೊದಲಾದ ಪ್ರಭಾವಿ ಹುದ್ದೆಗಳು ಸೀಮಿತವಾಗಬಾರದು, ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಕೇವಲ ತುಪ್ಪ ಸವರುವ ಕೆಲಸ ಮಾಡಲಾಗುತ್ತಿದೆ ಎಂಬ ಆತಂಕ ಕಾಡುತ್ತಿದೆ, ಕೂಡಲೇ ಡಿಸಿಎಂ ಹುದ್ದೆ ಸೃಜಿಸಿ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ ಶಿವಾನಂದ ಪಾಟೀಲರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದರು.
ಹಿರಿಯ ಶಾಸಕರಾಗಿರುವ ಶಿವಾನಂದ ಪಾಟೀಲರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು, ಇದು ಜನತೆಯ ಆಗ್ರಹ ಸಹ ಹೌದು. ಸಮಸ್ತ ಮಠಾಧೀಶರು ಸಹ ಇದೇ ನಿಲುವು ಹೊಂದಿದ್ದಾರೆ. ಶಿವಾನಂದ ಪಾಟೀಲ ಕೇವಲ ಪಂಚಮಸಾಲಿ ಸಮಾಜಕ್ಕೆ ಸೀಮಿತವಲ್ಲ, ಎಲ್ಲ ಸಮಾಜದವರು ಅವರು ಡಿಸಿಎಂ ಆಗಲಿ ಎನ್ನುವ ಆಶಯ ಹೊಂದಿದ್ದಾರೆ ಎಂದರು. ಈ ಹಿಂದೆ ಆರೋಗ್ಯ ಖಾತೆ ನಿಭಾಯಿಸಿದ ಶಿವಾನಂದ ಪಾಟೀಲರು ರಾಜ್ಯದಾದ್ಯಂತ ಆಸ್ಪತ್ರೆಗಳಿಗೆ ಹೊಸ ಜೀವ, ಸಿಬ್ಬಂದಿ ನೇಮಕಾತಿ, ಹೊಸ ಕಟ್ಟಡಗಳ ನಿರ್ಮಾಣದ ಕಾರ್ಯ ಕೈಗೊಂಡಿದ್ದಾರೆ, ಬಸವನ ಬಾಗೇವಾಡಿ ಕ್ಷೇತ್ರದ ಮನೆ-ಮನೆಗೂ ಭೇಟಿ ನೀಡಿ ಕುಂದುಕೊರತೆಯನ್ನು ಆಲಿಸಿ ಅದನ್ನು ಪರಿಹರಿಸುವ ಏಕೈಕ ಶಾಸಕರಾಗಿದ್ದಾರೆ ಎಂದರು.
ಪಂಚಮಸಾಲಿ ಸಮಾಜದ ಮುಖಂಡ ಮಲ್ಲನಗೌಡ ಪಾಟೀಲ ಮಾತನಾಡಿ, ಆರು ಬಾರಿ ಶಾಸಕರಾಗಿರುವ ಹಾಗೂ ಸಹಕಾರಿ ಧುರೀಣರಾಗಿರುವ ಶಿವಾನಂದ ಪಾಟೀಲರಿಗೆ ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು, ಪಂಚಮಸಾಲಿ ಸಮಾಜಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಶಿವಾನಂದ ಪಾಟೀಲರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ಸಮಸ್ತ ಪಂಚಮಸಾಲಿ ಸಮಾಜದ ಹಕ್ಕೊತ್ತಾಯವಾಗಿದೆ, ಪಂಚಮಸಾಲಿ ಸಮಾಜಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಬೇಡಿ, ಸುಮ್ಮನೆ ಕುಳಿತರೆ ಅವಕಾಶ ಸಿಗುವುದಿಲ್ಲ, ಹೀಗಾಗಿ ನಮ್ಮ ಕೂಗು ಪ್ರಬಲಗೊಳಿಸುತ್ತಿದ್ದೇವೆ, ಒಂದು ವೇಳೆ ಈ ಬಾರಿಯೂ ಅವಕಾಶ ತಪ್ಪಿದರೆ ತನ್ನ ತಪ್ಪನ್ನು ತಾನೇ ಅನುಭವಿಸಬೇಕಾಗುತ್ತದೆ, ಈ ಪರಿಸ್ಥಿತಿಯನ್ನು ಸೃಷ್ಟಿಸಿಕೊಳ್ಳದಿದ್ದರೆ ಒಳಿತು ಎಂದರು.
ಇಡೀ ಪಂಚಮಸಾಲಿ ಸಮುದಾಯ ಈ ಒತ್ತಾಯಕ್ಕೆ ಬದ್ಧವಾಗಿದೆ, ಪಂಚಮಸಾಲಿ ಸಮಾಜದ ಕೂಗಿಗೆ ಕಾಂಗ್ರೆಸ್ ಪಕ್ಷ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಸಹಕಾರಿ ಧುರೀಣ ಗುರುಶಾಂತ ನಿಡೋಣಿ ಮಾತನಾಡಿ, ಶಿವಾನಂದ ಪಾಟೀಲ ಅಭಿವೃದ್ಧಿ ಪರ ಹಾಗೂ ರೈತಪರ ರಾಜಕಾರಣಿ. ಈ ಹಿಂದೆ ಆರೋಗ್ಯ ಸಚಿವರಾಗಿ ಜಿಲ್ಲಾ ಆಸ್ಪತ್ರೆ ಪ್ರಗತಿ, ಟ್ರಾಮಾ ಸೆಂಟರ್ ಮೊದಲಾದವುಗಳನ್ನು ಆರಂಭಿಸಿದ್ದರು. ನೀರಾವರಿ ಯೋಜನೆಗಳು ಸಾಕಾರಗೊಳ್ಳಲು ಚಾಣಕ್ಷ ರಾಜಕಾರಣಿ ಎಂದೇ ಹೆಸರಾಗಿರುವ ಶಿವಾನಂದ ಪಾಟೀಲರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದರು.
ಸಂಗಮೇಶ ಶರಣರು, ಗುರುಶಾಂತ ನಿಡೋಣಿ, ಮಲ್ಲನಗೌಡ ಪಾಟೀಲ, ರಾಜುಗೌಡ, ಸೋಮನಗೌಡ ಪಾಟೀಲ, ಮಲ್ಲು ದೇಸಾಯಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.