ಶಿವಾಜಿ ಮಾರ್ಗ ಎಲ್ಲರಿಗೂ ಆದರ್ಶ: ಮಲ್ಲಿಕಾರ್ಜುನ ಸ್ವಾಮಿ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.20:- ಶಿವಾಜಿ ಮಹಾರಾಜರು ನಾಡುನುಡಿಯನ್ನು ಕಟ್ಟಿ ಬೆಳಸುವ ನಿಟ್ಟಿನಲ್ಲಿ ಉತ್ತಮ ಮಾರ್ಗಗಳನ್ನು ಅಳವಡಿಸಿಕೊಂಡಿದ್ದರು. ಅವೆಲ್ಲವೂ ಇಂದು ನಮಗೆ ಆದರ್ಶ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಿದ್ದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ಕರ್ನಾಟಕದಾದ್ಯಂತ ಛತ್ರಪತಿ ಶಿವಾಜಿ ಜಯಂತಿಯನ್ನು ಬಹಳ ವಿಜೃಂಭಣೆಯಿoದ ಆಚರಿಸಲಾಗುತ್ತಿದೆ. ಶಿವಾಜಿ ಮಹಾರಾಜರು ನಾಡನ್ನು ಕಟ್ಟುವ ಹಾಗೂ ಸಾಮ್ರಾಜ್ಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅವರು ಅಳವಡಿಸಿಕೊಂಡಿದ್ದತಹ ಆದರ್ಶಗಳು, ಸಂಸ್ಕೃತಿ, ಆಚರಣೆಗಳನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು. ಅಂತವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಾವು ಉತ್ತಮ ಸಮಾಜ ಕಟ್ಟಲು ಮುಂದಾಗಬೇಕು ಎಂದರು.
ಬಸುದೇವ್ ಸೋಮಾನಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಬಿ ರಮೇಶ್ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿ, ಶಿವಾಜಿ ಮಹಾರಾಜ್ ಅವರು ಒಬ್ಬ ಆದರ್ಶ ಪುರುಷ, ಸರ್ವಧರ್ಮವನ್ನು ಸಮಾನವಾಗಿ ಕಾಣುತ್ತಿದ್ದ ಸರ್ವಗುಣ ಸಂಪನ್ನ, ಇಂತಹ ಮಹಾನ್ ವ್ಯಕ್ತಿಯ ಜಯಂತಿಯoದು ಮಹಾರಾಷ್ಟ್ರದಲ್ಲಿ ಸಾರ್ವಜನಿಕ ರಜೆಯನ್ನು ನೀಡುವುದರ ಮೂಲಕ ದೊಡ್ಡ ಹಬ್ಬದ ರೀತಿ ಆಚರಣೆ ಮಾಡುತ್ತಾರೆ ಎಂದರು.
ಈ ದೇಶವನ್ನು ಸಾವಿರಾರು ರಾಜರು ಆಳಿ ಮರೆಯಾಗಿದ್ದಾರೆ. ಆದರೆ ಶಿವಾಜಿಯರು ತಮ್ಮ ಮರಣದ ನಂತರವೂ ಪ್ರತಿಯೊಬ್ಬರ ಮನಸಿನಲ್ಲಿಯೂ ಮಹಾರಾಜರಾಗಿ ಇಂದಿಗೂ ಸಂಭ್ರಮಿಸುತ್ತಿದ್ದಾರೆ. ಇದು ಅವರು ಅವರ ವ್ಯಕ್ತಿತ್ವದಿಂದ ಗಳಿಸಿರುವ ಗೌರವ. ಇವರ ಸಾಲಿಗೆ ಇನ್ನೂ ಹಲವಾರು ಮಹಾಪುರುಷರು ಸೇರುತ್ತಾರೆ. ಅಂತಹ ವ್ಯಕ್ತಿಗಳ ಸಾಧನೆ, ಆದರ್ಶ ಗುಣಗಳನ್ನು ಇಂದಿನ ಯುವಜನರಿಗೆ ತಿಳಿಸುವ ಕೆಲಸವನ್ನು ಜಯಂತಿಗಳು ಮಾಡುತ್ತಿವೆ ಎಂದು ಹೇಳಿದರು.
ಜನಪರ ನಾಯಕನಾಗಿ ಜನಪ್ರಿಯನಾಗಿದ್ದ ಶಿವಾಜಿಯವರ ಸಾಧನೆ ಒಂದೆರಡು ದಿನಗಳದ್ದಲ್ಲ. ಹಲವಾರು ವರ್ಷಗಳ ಹೋರಾಟ. ಶಿವಾಜಿಯವರು ತಮ್ಮ ಆಡಳಿತದಲ್ಲಿ ಸುಧಾರಣೆ ತರಲು ಹೊಸ ಮಾದರಿಯನ್ನು ಅಳವಡಿಸಿಕೊಂಡು ಸರ್ವಧರ್ಮದವರನ್ನು ಒಂದು ಗೂಡಿಸಿ ಆರ್ಥಿಕ ಸಮಾನತೆಗಾಗಿ ಹೋರಾಡಿದರು. ಬದುಕಿನಲ್ಲಿ ಕತ್ತಿಗೆ ಕತ್ತಿ, ಪ್ರೀತಿಗೆ ಪ್ರೀತಿ ಎಂಬ ಸೂತ್ರವನ್ನು ಅಳವಡಿಸಿಕೊಂಡು ಸಾಕಷ್ಟು ಹೊರಾಟಗಳನ್ನು ಮಾಡಿದ ಧೀಮಂತ ವ್ಯಕ್ತಿ, ಅವರ ಧೀರ ಗುಣ ದಿಟ್ಟ ನಿರ್ಧಾರ ಇವತ್ತಿನ ಕಾಲಕ್ಕೆ ಪ್ರಸ್ತುತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಮಡ್ಡಿಕೆರೆ ಗೋಪಾಲ್, ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಕೆ.ನಾಗೇಂದ್ರ, ಅಧ್ಯಕ್ಷರಾದ ಚಂದ್ರರಾವ್, ಕಾರ್ಯದರ್ಶಿ ಮುಕುಂದರಾವ್, ಖಜಾಂಚಿ ಹರಿರಾವ್ ಸಿಂದೆ ಹಾಗೂ ಸಮುದಾಯದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.