ಶಿವಾಜಿ ಮಹಾರಾಜರ ಧೈರ್ಯ, ಶೌರ್ಯ ಸ್ಪೂರ್ತಿ

ಬ್ಯಾಡಗಿ,ಫೆ20: ಶಿವಾಜಿ ಮಹಾರಾಜರು ಹೊಂದಿದ್ದ ಹೋರಾಟ ಮನೋಭಾವ, ತೋರಿದ ಧೈರ್ಯ, ಶೌರ್ಯ ಯುವಕರಿಗೆ ಸ್ಪೂರ್ತಿಯಾಗಿದೆ ಎಂದು ತಹಶೀಲ್ದಾರ್ ಎಸ್.ಎ.ಪ್ರಸಾದ್ ಹೇಳಿದರು.
ಪಟ್ಟಣದ ತಾಲೂಕಾ ಕಚೇರಿಯ ಸಭಾಭವನದಲ್ಲಿ ತಾಲೂಕಾಡಳಿತದ ವತಿಯಿಂದ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಷ್ಟ್ರವನ್ನು ಪರಕೀಯರ ಆಡಳಿತದಿಂದ ಮುಕ್ತಗೊಳಿಸಿ ರಕ್ಷಿಸುವಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ಇಂತಹ ಮಹಾನ್ ವ್ಯಕ್ತಿಯು ಯಾವುದೇ ಒಂದು ಜನಾಂಗಕ್ಕೆ ಮಾತ್ರ ಸೀಮಿತಗೊಳ್ಳಬಾರದು. ರಾಷ್ಟ್ರನಾಯಕರಾಗಿ ಧರ್ಮ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ತ್ಯಾಗ, ಬಲಿದಾನದ ಪರಿಣಾಮವಾಗಿ ಇಂದು ಸಮಾಜದಲ್ಲಿ ಜನರು ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ತಾಲೂಕಾ ಬಿಜೆಪಿ ಅಧ್ಯಕ್ಷರಾದ ಸಮಾಜದ ಮುಖಂಡ ಹಾಲೇಶ ಜಾಧವ್ ಮಾತನಾಡಿ, ರಾಷ್ಟ್ರದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶಿವಾಜಿಯವರ ಶ್ರಮ ಅವಿಸ್ಮರಣೀಯವಾಗಿದೆ. ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಗೌರವ ಸಲ್ಲಿಸಿದಂತಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಫಕ್ಕೀರಮ್ಮ ಚಲುವಾದಿ, ಸಂಬಾಜಿ ಜಾಧವ್, ಕೃಷ್ಣಾ ಜಾಧವ್, ಗಣೇಶ ಅಚಲಕರ್, ವಿಷ್ಣುಕಾಂತ್ ಬೆನ್ನೂರ್, ಮಂಜುನಾಥ ಜಾಧವ್ ಹಾಗೂ ಮರಾಠಾ ಸಮಾಜದ ಮುಖಂಡರು. ತಾಲೂಕಾ ಕಚೇರಿಯ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.