ಶಿವಾಜಿ ಮಹಾರಾಜರ ತತ್ವಗಳು ಎಲ್ಲ ಜನಾಂಗಕ್ಕೆ ದಾರಿ ದೀಪ: ಭಗವಂತ ಖೂಬಾ

ಸಂಜೆವಾಣಿ ವಾರ್ತೆ
ಬೀದರ್:ಫೆ.19: ಛತ್ರಪತಿ ಶಿವಾಜಿ ಮಹಾರಾಜರು ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿರದೆ ಅವರು ಇಡೀ ಮನುಕುಲಕ್ಕೆ ಮಾದರಿಯಾಗಿರುವರು ಎಂದು ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾದ ಭಗವಂತ ಖೂಬಾ ಹೇಳಿದರು.
ನಗರದ ಶಿವಾಜಿ ವೃತ್ತದಲ್ಲಿ ಇಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ನಿಮಿತ್ಯ ಶಿವಾಜಿ ಮಹಾರಾಜರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಶಿವಾಜಿ ಮಹಾರಾಜರ ತತ್ವಗಳು ಎಲ್ಲಾ ಸಮಾಜಕ್ಕೆ ಆದರ್ಶಪ್ರಾಯವಾಗಿದ್ದು ಅವರ ವಿಚಾರ ಧಾರೆಗಳು ಇಂದಿನ ಯುವ ಜನಾಂಗ ಮೈಗೂಡಿಸಿಕೊಂಡರೆ ದೇಶದ ಏಕತೆ ಅಖಂಡತೆ ಹಾಗೂ ಸಾರ್ವಭೌಮತ್ವ ಗಟ್ಟಿಗೊಳ್ಳಲಿದೆ ಎಂದು ತಿಳಿಸಿದರು.
ಶಿವಾಜಿ ಮಹಾರಾಜರು ಕೇವಲ ತಮ್ಮ ಆಸ್ಥಾನಕ್ಕಾಗಿ ಹೋರಾಟ ನಡೆಸದೆ ಅಂದು ಇಡೀ ಭಾರತದ ಪ್ರಭುತ್ವ ಹಾಗು ಅಖಂಡತೆಯನ್ನು ಎತ್ತಿ ಹಿಡಿಯಲು ಹೋರಾಟ ನಡೆಸಿದರು. ಅವರ ತ್ಯಾಗ ಹಾಗೂ ಭಕ್ತಿಗೆ ಅಂದು ಮಾತೆ ಭವಾನಿಯೂ ಪ್ರಸನ್ನಳಾಗಿ ಶಿವಾಜಿ ಮಹಾರಾಜರಿಗೆ ಖಡ್ಗವನ್ನು ನೀಡಿ ದೇಶ ಸಂರಕ್ಷಣೆಗೆ ಆಶೀರ್ವದಿಸಿರುವುದು ಇಂದು ಇದನ್ನು ಯುವ ಜನಾಂಗ ಮನದಟ್ಟು ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯದ ಪೌರಾಡಳಿತ ಸಚಿವರಾದ ರಹಿಮ್ ಖಾನ್, ವಿಧಾನ ಪರಿಷತ ಸದಸ್ಯರಾದ ರಘುನಾಥರಾವ ಮಲ್ಕಾಪೂರೆ,ಮಾಜಿ ಸಚಿವರಾದ ಬಂಡೆಪ್ಪ ಖಾಶಂಪುರ್, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಗಿರೀಶ ಬಡೌಲೆ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್ ಎಲ್, ಅಟಲ್ ಫೌಂಡೇಶನ್ ಅಧ್ಯಕ್ಷ ಗುರುನಾಥ ಕೊಳ್ಳೂರ್, ಕಾರ್ಯದರ್ಶಿ ಬಾಬು ವಾಲಿ, ಸಮಾಜದ ಮುಖಂಡರಾದ ಪ್ರದೀಪ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ವಿಭಾಗದ ಸರ್ಕಾರಿ ಅಭಿಯೋಜಕ ಕೇಶವ ಶ್ರೀಮಾಳೆಯವರ ಪುತ್ರ ಶಿವಾಜಿ ಮಹಾರಾಜರ ವೇಷ ಧರಿಸಿ ಸರ್ವರ ಮೆಚ್ಚುಗೆಗೆ ಪಾತ್ರವಾದನು.