ಶಿವಾಜಿ ಮಹಾರಾಜರ ಜೀವನ ಎಲ್ಲರಿಗೂ ಪ್ರೇರಣೆ

ಭಾಲ್ಕಿ:ಫೆ.20: ಶಿವಾಜಿ ಮಹಾರಾಜರು ಯಾವುದೇ ಜಾತಿ, ಸಮುದಾಯಕ್ಕೆ ಸೀಮಿತವಾಗಿಲ್ಲ ಅವರ ಜೀವನವು ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಟೌನ್‍ಹಾಲ್ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಭಾನುವಾರ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿವಾಜಿ ಅವರು ಧೈರ್ಯದ ಸಾಕಾರ ಮೂರ್ತಿ, ಸಹಾನುಭೂತಿ ಮತ್ತು ಉತ್ತಮ ಆಡಳಿತಗಾರ. ಭಾರತ ತಾಯಿಯ ಶ್ರೇಷ್ಠ ಪುತ್ರರಲ್ಲಿ ಒಬ್ಬರಾದ ಛತ್ರಪತಿ ಶಿವಾಜಿ ಮಹಾರಾಜರ ಅಸಾಧಾರಣವಾದ ಅವರ ಜೀವನವು ಲಕ್ಷಾಂತರ ಜನರನ್ನು ಪ್ರೇರೇಪಿಸಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಒಬ್ಬ ಪರಾಕ್ರಮಶಾಲಿ ಯೋಧ ಮತ್ತು ಅತ್ಯುತ್ತಮ ಆಡಳಿತಗಾರನಾಗಿ ಗುರುತಿಸಿಕೊಂಡವರು. ಅವರ ಚಿಂತನೆ ಎಲ್ಲರಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.ಪ್ರಾಚಾರ್ಯ ಡಾ.ಪ್ರಾಣೇಶ ಬೇಳೆಂಬೆ ಉಪನ್ಯಾಸ ಮಂಡಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಅನಿಲ ಸುಂಟೆ, ಸಮಾಜದ ಮುಖಂಡ ಅನಿಲಕುಮಾರ ಶಿಂಧೆ, ತಾಪಂ ಇಓ ರಮೇಶ ನಾಥೆ, ಮುಖ್ಯಾಧಿಕಾರಿ ಸ್ವಾಮಿದಾಸ್ ಸೇರಿದಂತೆ ಪುರಸಭೆ ಸದಸ್ಯರು, ಮುಖಂಡರು ಇದ್ದರು. ತಹಸೀಲ್ದಾರ ಪಿ.ಜೆ.ಪವಾರ್ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹಜರ್ ಹುಸೇನ್ ವಂದಿಸಿದರು.