ಶಿವಸೇನೆ ಮೇಲುಗೈಗಾಗಿ ಕಿತ್ತಾಟ ಶಿಂಧೆ-ಠಾಕ್ರೆ ಬಣಕ್ಕೆ ಚು.ಆಯೋಗ ನೋಟಿಸ್

ನವದೆಹಲಿ,ಜು.೨೩- ಬಹುಮತ ಸಾಬೀತುಪಡಿಸುವ ಸಂಬಂಧ ಪೂರಕ ದಾಖಲೆಗಳನ್ನು ಮುಂದಿನ ತಿಂಗಳು ೮ರೊಳಗೆ ಸಲ್ಲಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ಶಿಂಧೆ ಹಾಗೂ ಶಿವಸೇನೆ ನಾಯಕ ಉದ್ಧವ್‌ಠಾಕ್ರೆ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಇತ್ತೀಚೆಗೆ ಏಕನಾಥ್‌ಶಿಂಧೆ ಬಣ ಉದ್ಧವ್‌ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿಯೂ ಆಗಿದೆ.
ಆದರೆ, ಈಗ ಶಿವಸೇನೆ ಪಕ್ಷವನ್ನು ಯಾರು ನಿಯಂತ್ರಿಸಬೇಕು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಠಾಕ್ರೆ ಮತ್ತು ಶಿಂಧೆ ನಡುವೆ ನಡೆಯುತ್ತಿರುವ ರಾಜಕೀಯ ಮೇಲಾಟದ ಮಧ್ಯೆ ಕೇಂದ್ರ ಚುನಾವಣಾ ಆಯೋಗ ನೋಟಿಸ್ ನೀಡಿರುವುದು ಮತ್ತೊಂದು ಬಿಕ್ಕಟ್ಟಿಗೆ ಕಾರಣವಾಗಿದೆ. ಈ ಸಂಬಂಧ ಪೂರಕ ದಾಖಲೆಗಳನ್ನು ಸಲ್ಲಿಸಿದ ಬಳಿಕ ಚುನಾವಣಾ ಆಯೋಗ ಎರಡೂ ಬಣಗಳ ವಾದವನ್ನು ಆಲಿಸಲಿದೆ.
ಮಹಾರಾಷ್ಟ್ರ ವಿಧಾನಸಭೆಯ ೫೫ ಶಿವಸೇನಾ ಶಾಸಕರ ಪೈಕಿ ೪೦ ಹಾಗೂ ೧೮ ಲೋಕಸಭಾ ಸದಸ್ಯರ ಪೈಕಿ ೧೨ ಮಂದಿ ಬೆಂಬಲ ತಮಗಿದೆ ಎಂದು ಏಕನಾಥ್‌ಶಿಂಧೆ ಹೇಳಿಕೊಂಡಿದ್ದರು.
ಶಿವಸೇನೆ ಹಿಬ್ಭಾಗವಾಗಿರುವುದು ಸ್ಪಷ್ಟವಾಗಿದ್ದು, ಶಿಂಧೆ ನೇತೃತ್ವದಲ್ಲಿ ಒಂದು ಬಣ, ಉದ್ಧವ್‌ಠಾಕ್ರೆ ನೇತೃತ್ವದ ಒಂದು ಬಣವಿದೆ. ಈ ಎರಡೂ ಬಣಗಳು ತಮ್ಮದೇ ನಿಜವಾದ ಶಿವಸೇನೆ ಎಂಬುದು ಪಕ್ಷದ ಚಿನ್ಹೆಗಾಗಿ ಹೋರಾಟ ನಡೆಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ.
ಲಿಖಿತ ಮೂಲಕ ದಾಖಲೆ ಸಲ್ಲಿಸುವಂತೆ ಎರಡೂ ಬಣಗಳಿಗೆ ಆಯೋಗ ಸೂಚನೆ ನೀಡಿದ್ದು, ದಾಖಲೆಗಳು, ಪುರಾವೆಗಳು ಮತ್ತು ಲಿಖಿತ ಹೇಳಿಕೆಗಳನ್ನು ಪರಿಶೀಲಿಸಿದ ಬಳಿಕ ವಿಸ್ತೃತ ವಾದ ಆಲಿಸಲಾಗುವುದು ಎಂದು ಹೇಳಲಾಗಿದೆ.
ಉದ್ಧವ್‌ಠಾಕ್ರೆ ಬಣದ ಶಾಸಕರನ್ನು ಅನರ್ಹಗೊಳಿಸುವಂತೆ ಏಕನಾಥ್‌ಶಿಂಧೆ ಬಣ ಸ್ಪೀಕರ್‌ಗೆ ಮನವಿ ಮಾಡಿತ್ತು. ಜು. ೧೧ ರಂದು ಈ ಸಂಬಂಧ ನಿರ್ದೇಶನ ನೀಡಿದ ಸುಪ್ರೀಂಕೋರ್ಟ್, ಅನರ್ಹತೆ ಕುರಿತಂತೆ ಯಾವುದೇ ಕ್ರಮ ಜರುಗಿಸದಂತೆ ಸೂಚಿಸಿತ್ತು.
ಕಳೆದ ತಿಂಗಳು ವಿಧಾನಸಭಾಧ್ಯಕ್ಷರ ಆಯ್ಕೆ ಸಂಬಂಧ ನಡೆದಿದ್ದ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದವರನ್ನು ಅನರ್ಹಗೊಳಿಸಬೇಕು ಎಂದು ಶಿಂಧೆ ಬಣ ಒತ್ತಾಯಿಸಿತ್ತು. ಎರಡೂ ಬಣಗಳಿಗೆ ಅಹವಾಲು ಸಲ್ಲಿಸಲು ಜು. ೨೭ರವರೆಗೆ ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದ್ದು, ಆ. ೧ ರಂದು ವಿಚಾರಣೆ ನಡೆಯಲಿದೆ.