
ವಿಜಯಪುರ: ಜಗತ್ತಿನ ಯಾವುದೇ ದೇಶದಲ್ಲಿ ನಡೆಯದ ಸಮಾಜೋಧಾರ್ಮಿಕ, ನೈತಿಕ ಕ್ರಾಂತಿಯಾದದ್ದು ಕರ್ನಾಟಕದಲ್ಲಿ ಮಾತ್ರ. ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ವೈಚಾರಿಕತೆ, ಸಹಬಾಳ್ವೆಯ ಸಭ್ಯಸಮಾಜವನ್ನು ನಿರ್ಮಿಸುವ ಧ್ಯೇಯದಿಂದ ಕನ್ನಡನೆಲದಲ್ಲಿ ಅಪೂರ್ವವಾದ ಆಂದೋಲನವನ್ನು ಹುಟ್ಟುಹಾಕಿ ಲೋಕಸೋಜಿಗವನ್ನು ಸೃಷ್ಟಿಸಿದ ಬಸವಣ್ಣನವರು ಕಾಯಕವನ್ನೇ ಕೈಲಾಸವನ್ನಾಗಿಸಿ ಕಾಯಕನಿಷ್ಟೆ, ದಾಸೋಹಂಭಾವನೆ, ಅನುಭಾವದ ಶ್ರೇಷ್ಟತೆಯನ್ನು ಕಲಿಸಿಕೊಟ್ಟವರು ಎಂದು ರೋಟರಿ ವಿಜಯಪುರ ಅಧ್ಯಕ್ಷ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ಪಟ್ಟಣದ ಯಲುವಹಳ್ಳಿ ರಸ್ತೆಯಲ್ಲಿರುವ ಚಿಕ್ಕಪ್ಪಯ್ಯನವರ ಮಠದ ಇತಿಹಾಸಪ್ರಸಿದ್ಧ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಬಸವಜಯಂತಿ ಅಂಗವಾಗಿ ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಹುಸ್ಕೂರು ಲಿ.ಶಿವಮ್ಮ ಮತ್ತು ಎಚ್.ಜಿ.ಚನ್ನಪ್ಪ ಮಾಸ್ತರ ದತ್ತಿ ಉಪನ್ಯಾಸ, ಕಾಯಕ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಸವಜಯಂತಿ ಆಚರಣೆಯು ಜಗತ್ತಿನಾದ್ಯಂತ ಆಚರಿಸಲ್ಪಡುತ್ತಿದ್ದು ಅದು ನಮ್ಮ ಕನ್ನಡನೆಲದ ಸಾಂಸ್ಕೃತಿಕ ಬದುಕಿನ ಬಗೆಗಿನ ಬದ್ಧತೆಯ ಪ್ರತೀಕವಾಗಿದೆ. ಜಾತಿಮತಗಳ ಜಂಜಡ ಬದುಕು, ಪಂಥ-ಪಂಗಡಗಳ ಪ್ರಶ್ನೆ, ಮೇಲು-ಕೀಳುಗಳ ಮಡಿವಂತಿಕೆ, ವರ್ಣ-ವರ್ಗಗಳ ಭೇಧ, ಅಂತಸ್ತು-ಅಧಿಕಾರಗಳ ಅವಾಂತರಗಳಿಲ್ಲದಿರುವುದರಿಂದ ಬಸವಣ್ಣವರ ಜೀವನಸಂದೇಶಗಳು ಸಾರ್ವಕಾಲಿಕ ಅನುಕರಣೀಯವಾದುವು ಎಂದರು. ರೋಟರಿ ಮಾಜಿ ಅಧ್ಯಕ್ಷ ಎಸ್.ಬಸವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಣ್ಣನವರು ೧೨ ನೇ ಶತಮಾನದಲ್ಲಿ ಜಗದ ಹಿತಾರ್ಥಕ್ಕೆ ಬಂದ ಸಾಗರದೊಳಗಿನ ಜ್ಯೋತಿಯಂತೆ ಭಾವನೆಯಿದೆ. ಅಂದಿನ ಸಮಾಜದಲ್ಲಿ ಹುಟ್ಟಿನಿಂದ ಮನುಷ್ಯನ ಯೋಗ್ಯತೆಯನ್ನು ಅಳೆಯದೇ ಗುಣದಿಂದ ಅಳೆಯಬೇಕೆನ್ನುವ ಪರಿಕಲ್ಪನೆಗೆ ನಾಂದಿಯನ್ನಾಡಿದವರು. ದೇಶದ ಮೊಟ್ಟಮೊದಲ ಸ್ವತಂತ್ರ ವಿಚಾರವಾದಿಯಾಗಿ, ವಿಶ್ವಕ್ಕೆ ಅಧ್ಯಾತ್ಮಿಕ ಮತ್ತು ಧಾರ್ಮಿಕ ಸಮಾನತೆಯ ಕನ್ನಡ ನಾಡಿನ ರಾಯಭಾರಿಯಾಗಿ ಬಸವಣ್ಣನವರ ಕೊಡುಗೆ ಅಪಾರ ಎಂದರು.
ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರಹಡಪದ್ ಮಾತನಾಡಿ, ಅಂದಿನ ಸಮಾಜದಲ್ಲಿನ ಅಸಮಾನತೆ, ಮೌಢ್ಯತೆಯನ್ನು ಹೋಗಲಾಡಿಸಿ ಮೇಲು-ಕೀಳೆಂಬ ಭಾವನೆಯನ್ನು ತೊಲಗಿಸಿ, ಸಾಮಾಜಿಕ ಮತ್ತು ಸ್ತ್ರೀ ಸಮಾನತೆಗೆ ಒತ್ತು ಕೊಟ್ಟ ಶಿವಶರಣರ ಆದರ್ಶಗಳನ್ನು ಅನುಸರಿಸಬೇಕಿದೆ. ಬಸವಣ್ಣವರ ಸಂದೇಶಗಳಲ್ಲಿ ಪೂರ್ಣ ಮುಕ್ತ, ಸಂಪೂರ್ಣ ಪಾರದರ್ಶಕ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು ಅಡಗಿವೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷೆ ರಾಜೇಶ್ವರಿ, ಮಾಜಿ ಸದಸ್ಯ ಎಸ್.ಭಾಸ್ಕರ್, ಅಯೋಧ್ಯಾನಗರ ಶಿವಾಚಾರ ನಗರ್ತ ಯುವಕ ಸಂಘದ ಅಧ್ಯಕ್ಷ ಎ.ಮಂಜುನಾಥ್, ಗೌರವಾಧ್ಯಕ್ಷ ಪಿ.ಮುರಳೀಧರ್, ಮಾಜಿ ಅಧ್ಯಕ್ಷ ಎನ್.ವಿಶ್ವನಾಥ್, ಸಿ.ಭಾಸ್ಕರ್, ಸಿ.ಮಂಜುನಾಥ್, ವಿ.ಬಸವರಾಜು, ಎಸ್.ಪ್ರಕಾಶ್, ತಾಲ್ಲೂಕು ಶಸಾಪ ಕಾರ್ಯದರ್ಶಿ ಚಿದಾನಂದಬಿರಾದಾರ್, ಖಜಾಂಚಿ ವಿ.ಅನಿಲ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಆರ್.ಮುನಿರಾಜು, ತಾಲ್ಲೂಕು ಕದಳಿವೇದಿಕೆಯ ಅಧ್ಯಕ್ಷೆ ರೂಪಾಭಾಸ್ಕರ್, ನಗರ್ತ ಯುವಕ ಸಂಘ, ಶ್ರೀ ನಗರೇಶ್ವರಸ್ವಾಮಿ ದೇವಾಲಯ ಸಮಿತಿ, ಪತಂಜಲಿ ಯೋಗಶಿಕ್ಷಣ ಸಮಿತಿ, ಮಹಂತಿನಮಠ, ನಗರ್ತ ಮಹಿಳಾಸಂಘ, ಶ್ರೀ ವೀರಭದ್ರಸ್ವಾಮಿಗೋಷ್ಟಿ ಅಕ್ಕನ ಬಳಗೆ ಪದಾಧಿಕಾರಿಗಳು, ಮತ್ತಿತರರು ಇದ್ದರು.
ವಚನಗಾಯನ, ಸನ್ಮಾನ: ಭಾರತಿ, ಆಶಾ, ಅಕ್ಕನಬಳಗದ ಸದಸ್ಯರಿಂದ ವಚನಗಾಯನ ನಡೆಯಿತು. ಸ್ವೀಟ್ ತಿಂಡಿ ತಯಾರಿಕೆ ಕಾಯಕದ ಶಿವಕುಮಾರ್ ಅವರಿಗೆ ಕಾಯಕಜೀವಿ ಪ್ರಶಸ್ತಿನೀಡಿ ಸನ್ಮಾನಿಸಲಾಯಿತು. ಶ್ರೀ ಚನ್ನಬಸವಣ್ಣ ದೇವರಿಗೆ ದೊಡ್ಡಬಸಪ್ಪ, ಅಪ್ಪಯ್ಯಣ್ಣ, ಕೆ.ಬಿ.ಶ್ಯಾಮಣ್ಣ ಕುಟುಂಬದವರಿಂದ ವಿಶೇಷ ಅಲಂಕಾರ, ಪೂಜೆ ನಡೆಯಿತು. ಅನ್ನದಾನ, ಮಜ್ಜಿಗೆ, ಪಾನಕ ವಿತರಣೆ ವ್ಯವಸ್ಥೆಮಾಡಲಾಗಿತ್ತು.