ಶಿವಶರಣಗೌಡ ಕ್ಷಮೆಯಾಚನೆಗೆ ಆಗ್ರಹ

ದೇವದುರ್ಗ.ಮಾ.೩೧- ಸಂಸದ ರಾಜಾ ಅಮರೇಶ್ವರ ನಾಯಕ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ಮುಖಂಡ ಶಿವಶರಣಗೌಡ ಲಕ್ಕಂದಿನ್ನಿ ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ತಾಪಂ ಮಾಜಿ ಸದಸ್ಯ ಗೋವಿಂದರಾಜ್ ನಾಯಕ ಚಿಕ್ಕಗುಡ್ಡ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ರಾಯಚೂರಿನಲ್ಲಿ ಮಾಜಿ ಸಂಸದ ಬಿ.ವಿ.ನಾಯಕಗೆ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅಭಿಮಾನಿಗಳ ಸಭೆಯಲ್ಲಿ ಬಿಜೆಪಿ ಮುಖಂಡ ಶಿವಶರಣಗೌಡ ಲಕ್ಕಂದಿನ್ನಿ ರಾಜಾ ಅಮರೇಶ್ವರ ನಾಯಕ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಸಂಸದ ಅಮರೇಶ್ವರ ನಾಯಕ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಮತ ಕೇಳಲು ಬಂದರೆ ಮತದಾರರು ಚಪ್ಪಲಿಯಲ್ಲಿ ಹೊಡೆಯುತ್ತಾರೆ ಎಂದು ಹೇಳಿಕೆ ನೀಡಿದ್ದು ಖಂಡನೀಯ.
ರಾಜಾ ಅಮರೇಶ್ವರ ನಾಯಕ ವಾಲ್ಮೀಕಿ ಸಮಾಜದ ಪ್ರಮುಖರಾಗಿದ್ದು ಅವರಿಗೆ ಅಪಮಾನ ಮಾಡಿದ್ದು ಸರಿಯಲ್ಲ. ಕೂಡಲೇ ಶಿವಶರಣಗೌಡ ಲಕ್ಕಂದಿನ್ನಿ ಕ್ಷಮೆ ಕೇಳಬೇಕು. ಹೇಳಿಕೆ ಖಂಡಿಸಿ ದೊಡ್ಡ ಮಟ್ಟದ ಹೋರಾಟ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು. ಆದರೆ, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹೋರಾಟ ಕೈಬಿಟ್ಟಿದ್ದೇವೆ. ಇನ್ನು ಮುಂದೆ ಇಂಥ ಹೇಳಿಕೆ ನೀಡದಂತೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಮಾನಶಯ್ಯ ನಾಯಕ, ರಮೇಶ ಕುರ್ಕಿಹಳ್ಳಿ, ಬಸವರಾಜ, ಬುದ್ದಯ್ಯ ನಾಯಕ, ದೇವರಾಜ ಇದ್ದರು.