ಶಿವರುದ್ರಯ್ಯಗೆ ಬಸವರಾಜು ಪ್ರಶಸ್ತಿ ಪ್ರದಾನ

ಕೋಲಾರ,ಜು.೨೫-ಕನ್ನಡದ ಪ್ರಯೋಗಾತ್ಮಕ ಚಿತ್ರಗಳ ನಿರ್ದೇಶಕರಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆ ಪಡೆದಿರುವ ಕೆ.ಶಿವರುದ್ರಯ್ಯರಿಗೆ ೨೦೨೩ನೇ ಸಾಲಿನ ಡಾ.ಎಲ್. ಬಸವರಾಜು ಪ್ರಶಸ್ತಿಯನ್ನು ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಗರದ ಪತ್ರಕರ್ತರ ಭವನದಲ್ಲಿ ಪ್ರಧಾನ ಮಾಡಿದರು.
ಶಿವರುದ್ರಯ್ಯ ವೈಲ್ಡ್ ಲೈಫ್ ಮತ್ತು ಪಿಕ್ಟೋರಿಯಲ್ ಫೋಟೋಗ್ರಫಿ ವಿಭಾಗದಲ್ಲಿ ಸೃಜನಶೀಲ ಸಾಹಸ ಮಾಡಿ ಹೆಸರು ಗಳಿಸಿದ್ದಾರೆ. ರಂಗಕರ್ಮಿಯೂ ಆದ ಅವರು ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಸೀನಿಯರ್ ಆರ್ಟಿಸ್ಟ್ ಆಗಿ ಸೇವೆ ಸಲ್ಲಿಸಿದ್ದರು.
ಡಾ.ಎಲ್.ಬಸವರಾಜು ಅವರು ಹಳಗನ್ನಡದ ಪಠ್ಯಗಳು ಎಲ್ಲರಿಗೂ ಲಭ್ಯವಾಗುವಂತೆ ಸೃಜನಶೀಲವಾದ ಸರಳ ಪಠ್ಯಗಳನ್ನು ಕೊಟ್ಟ ರೀತಿಯಲ್ಲೇ ಶಿವರುದ್ರಯ್ಯ ಕನ್ನಡದ ಶ್ರೇಷ್ಠ ಕಥನಗಳನ್ನು ದೃಶ್ಯ ಮಾಧ್ಯಮದಲ್ಲಿ ಅಳವಡಿಸಿ ಚಿತ್ರಗಳನ್ನಾಗಿಸಿ ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಮಾಡಿದ್ದಾರೆ ಎಂದು ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು.
ಶಿವರುದ್ರಯ್ಯ ತಮ್ಮ ಚಿತ್ರಗಳಲ್ಲಿ ಪಾತ್ರಗಳನ್ನು ತಮ್ಮದೇ ದೃಷ್ಟಿಕೋನದಿಂದ ನಡೆಸದೆ ಪ್ರೇಕ್ಷಕರ ಜೊತೆ ನಡೆಸುವ ಸಂವಾದಕ್ಕೆ ಆದ್ಯತೆ ನೀಡಿದ್ದಾರೆ. ಈ ಬಗೆಯ ಧ್ಯಾನಸ್ಥ ಗುಣ ಅವರ ಫೋಟೋಗ್ರಫಿ ವಿಭಾಗದ ನೂರಾರು ಚಿತ್ರಗಳಲ್ಲೂ ಕಂಡುಬರುತ್ತದೆ ಎಂದು ಗಿರೀಶ್ ಕಾಸರವಳ್ಳಿ ಪ್ರಶಂಸೆ ಮಾಡಿದರು. ಪತ್ರಕರ್ತ ಚ.ಹ.ರಘುನಾಥ, ಎಲ್‌ಬಿ ಪ್ರತಿಷ್ಠಾನದ ಲಕ್ಷ್ಮೀಪತಿ ಕೋಲಾರ, ವಿ.ಚಂದ್ರಶೇಖರ ನಂಗಲಿ, ಮಾಲೂರು ಲಕ್ಷ್ಮೀನಾರಾಯಣ, ಎಚ್.ಎ.ಪುರುಷೋತ್ತಮರಾವ್, ಗೊಲ್ಲಹಳ್ಳಿ ಶಿವಪ್ರಸಾದ್, ಹಾ.ಮ.ರಾಮಚಂದ್ರ ಇದ್ದರು.