ಶಿವರಾಮ ಕಾರಂತ ಬಡಾವಣೆ ಕೈಬಿಡಲು ಬಿಡಿಎ ಮುತ್ತಿಗೆ ಚಳವಳಿ

ಬೆಂಗಳೂರು,ಮಾ.೨೪-ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆ ಕೈಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಆಗ್ರಹಿಸಿ ಬಿಡಿಎ ಮುತ್ತಿಗೆ ಚಳವಳಿ ನಡೆಸಿದರು.
ನಗರದಲ್ಲಿಂದು ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬಿಡಿಎ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ, ಡಾ.ಶಿವರಾಮ ಕಾರಂತ ಬಡಾವಣೆಗೆ ಒಳಪಟ್ಟ ರೈತರು ಮತ್ತು ನಿವೇಶನದಾರರುಗಳ ಸಂತ್ರಸ್ತರ ಸಂಘದ ನೇತೃತ್ವದಲ್ಲಿ ಸಾವಿರಾರು ಜನರನ್ನು ಸಂತ್ರಸ್ತರನ್ನಾಗಿ ಮಾಡಲಿರುವ ಶಿವರಾಮ ಕಾರಂತ ಬಡಾವಣೆ ಕೈಬಿಡಬೇಕೆಂದು ಈ ಹೋರಾಟ ನಡೆಯುತ್ತಿದೆ ಎಂದರು.
ಅಲ್ಲದೆ, ಬಿಡಿಎ ಅಧ್ಯಕ್ಷ ಹೆಚ್.ವಿಶ್ವನಾಥ್ ಅವರು ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಇದೇ ಬಡಾವಣೆ ಸಂತ್ರಸ್ತರ ದನಿಯಾಗಿದ್ದರು. ಪ್ರತಿಭಟನೆಯಲ್ಲಿ ಖುದ್ದು ಭಾಗವಹಿಸಿ, ಯಾವುದೇ ಹಂತದ ಹೋರಾಟದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಅದೇ ಯೋಜನೆ ಅನುಷ್ಠಾನಕ್ಕೆ ಉತ್ಸುಕರಾಗಿದ್ದಾರೆ. ಆದರೆ, ಅಧ್ಯಕ್ಷರ ಈ ನಡೆಯಿಂದ ಸಾವಿರಾರು ಜನರ ಸ್ಥಿತಿ ಅತಂತ್ರವಾಗಿದೆ. ಕೂಡಲೇ ಸರ್ಕಾರದ ಮೇಲೆ ಒತ್ತಡ ತಂದು, ಯೋಜನೆ ಕೈಬಿಡಲು ಮನವೊಲಿಸಬೇಕು ಎಂದು ಆಗ್ರಹಿಸಿದರು.
ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯಲ್ಲಿನ ೨೦೧೪ಕ್ಕೂ ಮುನ್ನ ಕಟ್ಟಲಾಗಿರುವ ಕಟ್ಟಡಗಳ ಕುರಿತ ಪರಿಶೀಲನೆಗೆ ಸುಪ್ರೀಂಕೋರ್ಟ್ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿಯು ತಮಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಸಮಿತಿಯ ಪ್ರಯತ್ನಗಳಿಗೆ ಭಂಗ ಉಂಟುಮಾಡುವ ಕೆಲಸ ಕೈಗೊಂಡು, ವದಂತಿಗಳನ್ನು ಹಬ್ಬಿಸುತ್ತಿದ್ದೀರಿ. ೧೭ ಗ್ರಾಮಗಳಲ್ಲಿ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದು, ಸಹಾಯ ಕೇಂದ್ರಗಳಿಗೆ ನಾಗರಿಕರು ಅಗತ್ಯ ಮಾಹಿತಿ ಸಲ್ಲಿಸಲು ಅಡ್ಡಿಪಡಿಸುತ್ತಿದ್ದೀರಿ’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ತಾವು ಅಂತಹ ಯಾವುದೇ ಅಡ್ಡಿಪಡಿಸುವ ಕೆಲಸ ಮಾಡಿಲ್ಲ. ಅಲ್ಲದೆ, ಸಮಿತಿಗೆ ಯಾವ ಯಾವ ದಾಖಲೆಗಳನ್ನು ನೀಡಬೇಕು ಎಂದು ಪರಿಶೀಲಿಸಿ ತಿಳಿಸುವುದಾಗಿ ಹೇಳಿದ್ದೆ. ಈ ಅಂಶವನ್ನು ಸಮಿತಿ ತಪ್ಪಾಗಿ ಅರ್ಥೈಸಿದ್ದು ನೋಟಿಸ್ ಜಾರಿ ಮಾಡಿದೆ. ಇದನ್ನು ಸಮಿತಿ ಮುಂದೆ ಹಾಜರಾಗಿ, ಮನದಟ್ಟು ಮಾಡಲಿರುವುದ್ದೇನೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದರು.
ಪ್ರತಿಭಟನೆಯಲ್ಲಿ ಅಬ್ಬಿಗೆರೆ ರಾಜಣ್ಣ, ಕೃಷ್ಣಪ್ಪ, ಪಂಚಾಕ್ಷರಿ, ಶಂಕರ್, ರವೀಶ್ ಮತ್ತಿತರರು ಉಪಸ್ಥಿತರಿದ್ದರು.