ಶಿವರಾಮೇಗೌಡ ವಿರುದ್ಧ ನಿಖಿಲ್ ಕಿಡಿ

ಬೆಂಗಳೂರು, ಮೇ ೨೦- ಒಬ್ಬರ ಸಾವು ಬಯಸೋದು ಅವರ ಸಂಸ್ಕೃತಿ ತೋರುತ್ತೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಮಾಜಿ ಸಂಸದ ಶಿವರಾಮೇಗೌಡರವರ ಆಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಶಿವರಾಮೇಗೌಡರು ಮಾತನಾಡಿರುವ ಆಡಿಯೋವನ್ನು ನಾನು ಕೇಳಿದೆ, ಈ ರೀತಿ ಲಘುವಾಗಿ ಮಾತನಾಡಬಾರದು. ರಾಜಕಾರಣ ಬೇರೆ, ಒಬ್ಬರ ಸಾವು ಬಯಸುವುದು ಅವರ ಸಂಸ್ಕೃತಿ ತೋರುತ್ತದೆ ಎಂದು ಶಿವರಾಮೇಗೌಡ ವಿರುದ್ಧ ಕಿಡಿಕಾರಿದರು.
ಶಿವರಾಮೇಗೌಡ ಅವರು ಮಾತನಾಡಿರುವ ಪ್ರತಿ ವಿಚಾರದಲ್ಲೂ ರಾಜ್ಯ ಸರ್ಕಾರದ ಕೈವಾಡ ಇದೆ. ಅವರು ಕೂಡಾ ಸರ್ಕಾರದ ಪ್ರಮುಖ ವ್ಯಕ್ತಿಯೊಬ್ಬರ ಹೆಸರು ಹೇಳಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರು ಬಂದು ತನಿಖೆ ಎದುರಿಸಬೇಕು ಎಂಬುದು ನನ್ನ ಸಲಹೆ ಎಂದರು.
ಈ ಪೆನ್‌ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತೆ ಹೆಣ್ಣು ಮಕ್ಕಳ ಮುಖವನ್ನು ಮರೆಮಾಚಿಲ್ಲ. ರಾಜಕಾರಣಕ್ಕಾಗಿ ಈ ರೀತಿ ಮಾಡುವುದು ಎಷ್ಟು ಸರಿ. ಈ ಬಗ್ಗೆ ಏಕೆ ತನಿಖೆಯಾಗುತ್ತಿಲ್ಲ. ಇದರಲ್ಲಿ ಯಾರ ಪಾತ್ರ ಇದೆ. ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇಲ್ಲವೇ, ಎಲ್ಲವೂ ತನಿಖೆಯಾಗಬೇಕು. ಪಾರದರ್ಶಕವಾಗಿ ತನಿಖೆಯಾದರೆ ಎಲ್ಲವೂ ಹೊರ ಬರುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಗನ ಭವಿಷ್ಯಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಶಿವರಾಮೇಗೌಡ ಹೇಳಿದ್ದಾರೆ. ಚುನಾವಣೆಗಳಲ್ಲಿ ಅಡ್ಜಸ್ಟ್‌ಮೆಂಟ್ ಕೆಲವು ಸಲ ಆಗುತ್ತೆ. ಬಹಳ ಜನ ಅಡ್ಜ್‌ಸ್ಟ್‌ಮೆಂಟ್ ಮಾಡಿಕೊಂಡು ಇವತ್ತು ಒಳ್ಳೆಯ ಸ್ಥಾನದಲ್ಲಿದ್ದಾರೆ. ಆದರೆ ನಮ್ಮ ಬಳಿ ಆ ರೀತಿ ಯಾವ ಅಡ್ಜ್‌ಸ್ಟ್‌ಮೆಂಟ್ ಇಲ್ಲ ಎಂದು ಅವರು ಹೇಳಿದರು.