ಶಿವರಾತ್ರಿ ಹಬ್ಬದ ಪ್ರಯುಕ್ತ ೪೦ ಅಡಿ ಎತ್ತರ ಶಿವಲಿಂಗ ದರ್ಶನ

ರಾಯಚೂರು.ಮಾ.೦೬- ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ವತಿಯಿಂದ ಶಿವರಾತ್ರಿ ಪ್ರಯುಕ್ತ ನಗರದಲ್ಲಿ ಪ್ರಪ್ರಥಮ ಬಾರಿಗೆ ೪೦ ಅಡಿ ಎತ್ತರದ ಶಿವಲಿಂಗ ದರ್ಶನ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮತ್ತು ಅಧ್ಯಾತ್ಮಿಕ ಕಾರ್ಯಕ್ರಮ ಹಾಗೂ ದಿ.೮ ರಂದು ನಗರದ ಈಶ್ವರಿ ವಿಶ್ವವಿದ್ಯಾಲಯ ಉದಯನಗರದಲ್ಲಿ ಬೆಳಿಗ್ಗೆ ಶಿವ ಧ್ವಜಾರೋಹಣ ನಡೆಯಲಿದೆ ಎಂದು ವಿದ್ಯಾಲಯದ ಸ್ಮಿತಾ ಅಕ್ಕ ಅವರು ಹೇಳಿದರು.
ಅವರಿಂದು ನಗರದ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶಿವರಾತ್ರಿ ಅಂಗವಾಗಿ ಈ ಭಾರಿ ವಿಶೇಷ ಧಾರ್ಮಿಕ ಹಾಗೂ ಜ್ಯೋತಿರ್ಲಿಂಗ ದರ್ಶನ ಆಯೋಜನೆ ಮಾಡಲಾಗಿದೆ ಎಂದರು. ಸಂಜೆ ೪ ಗಂಟೆಗೆ ನಂತರ ವಿದ್ಯಾಲಯದಿಂದ ಶಾಂತಿಯಾತ್ರೆ ನಡೆಯಲಿದೆ. ಅಂಬೇಡ್ಕರ ವೃತ್ತ, ನಗರಸಭೆ, ಸೂಪರ್ ಮಾರುಕಟ್ಟೆ, ಕಾಂಪ್ಲೆಕ್ಸ್, ಮಹಾವೀರ ವೃತ್ಚದಿಂದ ಚಂದ್ರಮೌಳೇಶ್ವರ ವೃತ್ತ, ಬಸವೇಶ್ವರ ವೃತ್ತದ ಮೂಲಕ ವಾಲಕಟ್ ಮೈದಾನಕ್ಕೆ ತಲುಪುತ್ತದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಅವರು ನೆರೆವೇರಿಸಲಿದ್ದಾರೆ ಎಂದರು. ಈ ಉದ್ದೇಶದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದ ರಾಜ ಅಮರೇಶ ನಾಯಕ, ಶಾಸಕ ಶಿವರಾಜ ಪಾಟೀಲ್ ಸೇರಿದಂತೆ ಜಿಲ್ಲೆಯ ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಈಶ್ವರಿಯ ಗೌರವ ಸಮರ್ಪಣೆ ನಡೆಯಲಿದೆ. ಜ್ಯೋತಿರ್ಲಿಂಗ ದರ್ಶನ, ಅಧ್ಯಾತ್ಮ ಚಿತ್ರ ಪ್ರದರ್ಶನ ಹಾಗೂ ೫೦೦೦ ವರ್ಷ ಕಾಲಚಕ್ರದ ರಹಸ್ಯವನ್ನು ತಿಳಿಸಿ ಸಮಯದ ಎಚ್ಚರಿಕೆ ಗಂಟೆಯನ್ನು ಬಾರಿಸುವ ಸೃಷ್ಠಿಚಕ್ರ ಚಿತ್ರದ ಮೂಲಕ ಜನತೆಯಲ್ಲಿ ಕರ್ತವ್ಯ ಪ್ರಜ್ಞೆಯನ್ನು ಮೂಡಿಸಲಾಗುತ್ತದೆ ಎಂದರು. ಶಿವರಾತ್ರಿ ಹಬ್ಬದ ಹಿನ್ನಲೆ ಪ್ರತಿ ದಿನ ಸಂಜೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ ಎಂದರು.