ಶಿವರಾತ್ರಿಗೆ ೧೫೦೦ ಹೆಚ್ಚುವರಿ ಬಸ್ ಸೇವೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮಾ.೫:ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರಿನಿಂದ ರಾಜ್ಯದ ಹಾಗೂ ಹೊರ ರಾಜ್ಯದ ಪ್ರಮುಖ ನಗರಗಳಿಗೆ ಈ ತಿಂಗಳ ೭ ರಿಂದ ೧೦ರ ವರೆಗೂ ಸುಮಾರು ೧,೫೦೦ ಹೆಚ್ಚುವರಿ ವಿಶೇಷ ಬಸ್‌ಗಳನ್ನು ಪ್ರಯಾಣಿಕರ ಸಂಚಾರಕ್ಕೆ ಒದಗಿಸಿದೆ.
ಈ ತಿಂಗಳ ೮ ರಂದು ಮಹಾಶಿವರಾತ್ರಿ ಹಾಗೂ ವಾರಾಂತ್ಯದ ದಿನಗಳನ್ನು ಗಮನದಲ್ಲಿಟ್ಟುಕೊಂಡು ೧,೫೦೦ ಬಸ್‌ಗಳ ಹೆಚ್ಚುವರಿ ಒಡಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.
ಬೆಂಗಳೂರು ನಗರದಿಂದ ರಾಜ್ಯ ಹಾಗೂ ಹೊರ ರಾಜ್ಯದ ಪ್ರಮುಖ ನಗರಗಳಿಗೂ ಈ ಬಸ್‌ಗಳ ಓಡಾಟ ನಡೆಯಲಿದೆ. ಮುಂಗಡವಾಗಿ ಟಿಕೆಟ್‌ನ್ನು ಕಾಯ್ದಿರಿಸಬಹುದಾಗಿದ್ದು, ೪ ಅಥವಾ ಹೆಚ್ಚು ಪ್ರಯಾಣಿಕರು ಒಮ್ಮೆಗೆ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇ. ೫ರಷ್ಟು ರಿಯಾಯಿತಿ,ಹೋಗುವ ಹಾಗೂ ಬರುವ ಪ್ರಯಾಣದ ಟಿಕೆಟ್‌ನ್ನು ಒಟ್ಟಿಗೆ ಕಾಯ್ದಿರಿಸಿದರೆ ಶೇ. ೧೦ ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಹೇಳಿದೆ. ಬೆಂಗಳೂರಿನಿಂದ ಹಬ್ಬದ ಪ್ರಯುಕ್ತ ವಿವಿಧ ನಗರಗಳಿಗೆ ಬಸ್‌ಗಳ ಕಾರ್ಯಾಚರಣೆ ದಿನಾಂಕ ೭ರಿಂದ ೧೦ರವರೆಗೂ ಇದ್ದು, ನಂತರ ರಾಜ್ಯ ಹಾಗೂ ಅಂತರಾಜ್ಯದ ವಿವಿಧ ನಗರಗಳಿಂದ ಬೆಂಗಳೂರಿಗೆ ದಿನಾಂಕ ೧೦ ಮತ್ತು ೧೧ ರಂದು ವಿಶೇಷ ಬಸ್‌ಗಳ ಕಾರ್ಯಾಚರಣೆಯನ್ನು ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಹೇಳಿದೆ.