ಶಿವಯೋಗ ಮಂದಿರ ಗೋಶಾಲೆಗೆ ಸಚಿವ ಚವ್ಹಾಣ ಭೇಟಿ

ಬಾದಾಮಿ,ನ21 ಇಂದು ರಾಜ್ಯದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಇವರು ಶಿವಯೋಗಮಂದಿರದ ಗೋಶಾಲೆಗೆ ಭೇಟಿ ನೀಡಿದರು. ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳ ಕರ್ತೃ ಗದ್ದಿಗೆಗೆ ದರ್ಶನ ಪಡೆದ ನಂತರ ಸಂಸ್ಥೆಯ ಪರವಾಗಿ ಪೂಜ್ಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಸಚಿವರನ್ನು ಸನ್ಮಾನಿಸಿ ಗೌರವಿಸಿದರು. ಗೋಶಾಲೆಯ ವಿವರವನ್ನು ಪಡೆದುಕೊಂಡು ಗೋಶಾಲೆಗೆ ತೆರಳಿ ಮೂರು ದಿನಗಳ ಹಿಂದೆ ಜನಿಸಿದ ಉತ್ತರ ಕರ್ನಾಟಕದ ಜವಾರಿ ತಳಿಯ ಆಕಳು ಕರುವನ್ನು ಎತ್ತಿಕೊಂಡು ಮುದ್ದಾಡಿ ತಮ್ಮ ಪಶು ಪ್ರೇಮವನ್ನು ವ್ಯಕ್ತಪಡಿಸಿದರು. ಇದರೊಂದಿಗೆ ಮನವಿಗೆ ಸ್ಪಂದಿಸಿದ ಸಚಿವರು ಸರಕಾರದಿಂದ ಹೆಚ್ಚಿನ ಸೌಲಭ್ಯವನ್ನು ನೀಡುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದನಗೌಡ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಶರಣಗೌಡ ಪಾಟೀಲ, ಬಸವರಾಜ ಯಂಕಂಚಿ ಸೇರಿದಂತೆ ಮುಂತಾದವರು ಹಾಜರಿದ್ದರು. ಅತಿವೃಷ್ಟಿಯಿಂದ ನೀಲಿನಾಲಿಗೆ ಮತ್ತು ಕೊಳಗಗುರು ರೋಗದಿಂದ ಕುರಿ ಮತ್ತು ಮೇಕೆಗಳು ಹೆಚ್ಚಾಗಿ ಸಾವನ್ನಪ್ಪಿದ್ದು, ಇದರಿಂದ ಕುರಿಗಾರರು ಸಂಕಷ್ಟಕ್ಕೆ ಒಳಗಾಗಿದ್ದು, ಈ ಹಿಂದೆ ಜಾರಿಯಲ್ಲಿದ್ದ ಅನುಗ್ರಹ ಯೋಜನೆಯನ್ನು ಪುನಃ ಜಾರಿಗೆ ಮಾಡಿ ಕುರಿಗಾರರಿಗೆ ನೆರವು ನೀಡಬೇಕೆಂದು ರಾಜ್ಯ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿ ಹನಮಂತ ಅಪ್ಪನ್ನವರ ನೇತೃತ್ವದಲ್ಲಿ ಶಿವಯೋಗಮಂದಿರದಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ ಹೊಸಮನಿ, ಮುಖಂಡರಾದ ಬೇಲೂರಪ್ಪ ಬೇಲೂರಪ್ಪನವರ, ಉಮೇಶ ಕಮಾಟರ, ಹನಮಂತ ದೊಡಮನಿ, ರಂಗಪ್ಪ ದೊಡಮನಿ, ಮುಂತಾದವರು ಹಾಜರಿದ್ದರು.