ಶಿವಯೋಗ ಕಾರ್ತಿಕೋತ್ಸವ ಸಂಭ್ರಮದಿಂದ ಸಂಪನ್ನ

ಬಾದಾಮಿ,ಡಿ23: ತಾಲೂಕಿನ ಸುಕ್ಷೇತ್ರ ಶಿವಯೋಗಮಂದಿರದ ಶ್ರೀ ಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯ 110 ನೇ ಕಾರ್ತಿಕೋತ್ಸವ ಹಾಗೂ ಜ್ಞಾನ ದೀಪೋತ್ಸವ ಸೋಮವಾರ ಸಂಜೆ ಸಡಗರ, ಸಂಭ್ರಮದಿಂದ ನೆರವೇರಿತು.
ತಾಲೂಕಿನ ಹೊಸೂರ ಗ್ರಾಮದ ವೇದಮೂರ್ತಿ ಮಹಾಲಿಂಗಯ್ಯ ಹಿರೇಮಠ ಇವರ ಸವಿನೆನಪಿಗಾಗಿ ಇವರ ಪುತ್ರರಾದ ಶ್ರೀರುದ್ರಯ್ಯ ಹಾಗೂ ಶ್ರೀ ವೀರಯ್ಯ ಹಿರೇಮಠ ಇವರು ಕಾರ್ತಿಕೋತ್ಸವದ ನಿಮಿತ್ತ ದಾಸೋಹ ಹಾಗೂ ಮೇಲ್ಮಠದ ಪ್ರಸಾದ ವ್ಯವಸ್ಥೆ ಹಾಗೂ ಭಕ್ತಿ ದಾಸೋಹ ಕೈಗೊಂಡಿದ್ದರು. ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳ ಹಾಗೂ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮೀಜಿಗಳ ಕರ್ತೃ ಗದ್ದಿಗೆಯ ಶಿಲಾಮಂಟಪಕ್ಕೆ ವಿದ್ಯುದ್ದೀಪಗಳ ಅಲಂಕಾರ ಮಾಡಿರುವುದು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ದೃಶ್ಯ ನೋಡುಗರ ಮನಸೆಳೆಯಿತು. ಯುವಕರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುವಲ್ಲಿ ಯುವಕರ ಸಂಖ್ಯೆ ಎದ್ದು ಕಾಣುತ್ತಿತ್ತು. ಬಹಳಷ್ಟು ಯುವಕರು ಸೆಲ್ಫಿ ತೆಗೆಯುವಲ್ಲಿ ನಿರತರಾಗಿದ್ದರು. ನೆರೆದ ಗ್ರಾಮಸ್ಥರು ಭಕ್ತರು ವಿದ್ಯುದ್ದೀಪ ಅಲಂಕಾರಕ್ಕೆ ಆಕರ್ಷಿತರನ್ನಾಗಿ ಮಾಡಿತು.
ಕಾರ್ತಿಕೋತ್ಸವದ ನಂತರ ಜ್ಞಾನದೀಪೋತ್ಸವ ಕಾರ್ಯಕ್ರಮದಲ್ಲಿ ಶಿವಯೋಗಮಂದಿರದಲ್ಲಿ ಶಿಕ್ಷಣ ಪಡೆದ ಅನೇಕ ಸ್ವಾಮೀಜಿಯವರು ಉಪಸ್ಥಿತರಿದ್ದು, ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಒಪ್ಪತ್ತೇಶ್ವರ ಶ್ರೀಗಳು, ಅಭಿನವ ಶ್ರೀ ಕಾಡಸಿದ್ದೇಶ್ವರ ಶ್ರೀಗಳು, ನವಗೃಹ ಹಿರೇಮಠದ ಶಿವಾಚಾರ್ಯ ಶ್ರೀಗಳು, ಶಿವಯೋಗಮಂದಿರದ ವಟುಸಾಧಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಗೋನಾಳ, ಶಿರಬಡಗಿ, ನಂದಿಕೇಶ್ವರ, ನೆಲವಿಗಿ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.