ಶಿವಯೋಗಿಯ ಸಿದ್ಧರಾಮನ ಚರಿತ್ರ”

’ಯೋಗಿಗಳ ಯೋಗಿ ಶಿವಯೋಗಿ ಸಿದ್ದರಾಮನೊಬ್ಬನೆ ಯೋಗಿ’ ಎಂದು ಸೊಡ್ಡಳ ಬಾಚರಸನಿಂದ ಹೊಗಳಿಸಿಕೊಂಡಿರುವುದು ಶಿವಯೋಗಿ ಸಿದ್ಧರಾಮನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದರೆ ಅತಿಶಯೋಕ್ತಿಯಾಗಲಾರದು. ಇವರೊಬ್ಬ ಕ್ರಿಯಾಶೀಲ ವ್ಯಕ್ತಿಯಾಗಿಸಿ ಕಾಣಿಸುತ್ತಾರೆ, ಸದಾ ಕೆರೆ ಬಾವಿ ದೇವಾಲಯಗಳ ನಿರ್ಮಾಣ ಕಾರ್ಯಗಳನ್ನು ಮಾಡುತ್ತ ಜೀವನ ಸಾಗಿಸುವುದರ ಜೊತೆಗೆ ಕಷ್ಟದಲ್ಲಿರುವ ಜನರನ್ನು ಮೇಲೆತ್ತುವ ಕೈಂಕರ್ಯದಲ್ಲಿ ತೊಡಗಿಸಿಕೊಂಡ ವ್ಯಕ್ತಿತ್ವ ಆತನದು. ಒಮ್ಮೆ ಬಿಲ್ಲೇಶ ಬೊಮ್ಮಯ್ಯ ಸಾಲು ಸೂಲ ಮಾಡಿ ಅವನ ಕ್ಷೇತ್ರಕ್ಕೆ ಬಂದಿರುತ್ತಾನೆ ಆತನನ್ನು ಕಷ್ಟದಿಂದ ಪಾರು ಮಾಡಲು ದೇವರಲ್ಲಿ ಪ್ರಾರ್ಥಿಸುತ್ತಾನೆ, ಅವರ ರಕ್ಷಣೆಯಾಗುತ್ತದೆ. ಇಂತಹ ಪರಹಿತ ಕಾಯುವ ಕಾರ್ಯಗಳನ್ನು ಸದಾ ಮಾಡುತ್ತಿರುತ್ತಾನೆ. ತಮ್ಮನ್ನು ಕುರಿತು “ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು ಅನುಗೊಂಬನಿತು ಕಾಯಕಂ ನಡೆಯುತ್ತಿರಬೇಕು” ಈ ಶರೀರ ವೃಥಾ ವ್ಯರ್ಥವಾಗಬಾರದು ಎಂಬ ಮನೋಭಾವವನ್ನು ಇಟ್ಟುಕೊಂಡು ಕಾಯಕ ಮಾಡಿ ಜೀವನ ಸಾಗಿಸಬೇಕೆಂಬ ತತ್ವವನ್ನು ಅಳವಡಿಸಿಕೊಂಡ ಮಹಾ ವ್ಯಕ್ತಿತ್ವ ಶಿವಯೋಗಿ ಸಿದ್ಧರಾಮನದು.
ಸಂಪತ್ತನ್ನೇ ಸರ್ವಸ್ವವೆಂದು ಭಾವಿಸುವ ಇಂದಿನ ಪರಿಸರದಲ್ಲಿ ಸಿದ್ಧರಾಮನ ಕಾಯಕ ತತ್ವಕ್ಕೆ ಹೆಚ್ಚಿನ ಮಹತ್ವ ಇರುವುದನ್ನು ಕಂಡುಕೊಳ್ಳುವುದು, ಕನ್ನಡ ನಾಡಿನ ಸಾಹಿತ್ಯದಲ್ಲಿ ಕಂಡು
ಬರುವ ಮಹಾಕವಿಗಳ ಶರಣರ ಹರಿದಾಸರ ತತ್ವಪದಕಾರರ ಹಾಗೂ ಅನುಭವಿ ಕವಿಗಳ ಹಿನ್ನೆಲೆ ಸಾಹಿತ್ಯ ಪ್ರಕಾರದ ವೈಶಿಷ್ಠತೆ, ಶರಣರು ಜನಿಸಿದ ಸ್ಥಳಗಳು ಅತ್ಯಂತ ರೋಮಾಂಚನಕಾರಿಯಾಗಿದ್ದು, ಎಂಟೂ ನೂರು ವರ್ಷಗಳ ಹಿಂದೆ ಬೆಳೆದು ಬಂದ ಕಾಯಕ ಸಿದ್ದಾಂತವನ್ನು ಶರಣರ ಮನೋಧರ್ಮದ ಹಿನ್ನೆಯಲ್ಲಿ ವಚನಗಳ ಬೆಳಕಿನಿಂದ ಸ್ಥಳ, ಪುರಾಣ, ಐತಿಹ್ಯ ಸಾಹಿತ್ಯಿಕ ಕೃತಿಗಳು ಹಾಗೂ ಶಾಸನಗಳ ಉಲ್ಲೇಖದನ್ವಯ ಈ ಕೊರತೆಯನ್ನು ನೀಗಿಸಿಕೊಡಲು ಪ್ರಯತ್ನಿಸುವುದು ಈ ಮಹಾಪ್ರಬಂಧದ ಉದ್ದೇಶವಾಗಿದೆ.
ಇಲ್ಲಿಯ ಶರಣರ ದಾಸರ ಮತ್ತು ತತ್ವಪದಕಾರರಂತಹ ಸಾಧಕರ ಸಾಹಿತ್ಯವನ್ನು ಮತ್ತು ಅವರವರ ಸಾಮಾಜಿಕ ಪರಿಸರದಲ್ಲಿದ್ದ ಮಿತಿಗಳನ್ನು ಮೀರಿ ಬೆಳೆದ ಅವರ ಸಾಧನೆಯ ಕಡೆಗೆ ಹಾಗೂ
ಅವರ ಬದುಕಿನ ಹೋರಾಟದತ್ತ ಹೆಚ್ಚು ಗಮನ ಹರಿಸುವುದು ಮುಖ್ಯವಾಗಿದೆ.
ಶಿವಯೋಗಿ ಸಿದ್ಧರಾಮನ ಚರಿತ್ರೆಯನ್ನು ಅನೇಕ ಶರಣರು ತಮ್ಮ ವಚನಗಳಲ್ಲಿ ವ್ಯಕ್ತಪಡಿಸಿರುವುದನ್ನು ನಾವು ಕಾಣಬಹುದಾಗಿದೆ. ರಾಘವಾಂಕ ಕವಿ ಸಿದ್ಧರಾಮ ಚಾರಿತ್ರ ಎಂಬ ಮಹಾ ಕಾವ್ಯವನ್ನು ಬರೆದಿರುವುದನ್ನು ನಾವು ಕಾಣಬಹುದು. ಶರಣರ ಸತ್ಯ ವಾಙ್ಮಯದ ನುಡಿಗಳಾದ ವಚನಗಳನ್ನು ಉಲ್ಲೇಖಿಸಿ ನೋಡುವುದಾದರೆ, ಅದರಲ್ಲಿ ಪ್ರಮುಖವಾಗಿ ಕಾಣಿಸುವ ಶರಣರು ಬಸವಣ್ಣ, ಚನ್ನಬಸವಣ್ಣ, ಅಕ್ಕಮಹಾದೇವಿ, ಅಲ್ಲಮ ಪ್ರಭುದೇವರು, ಮರುಳ ಶಂಕರದೇವ, ಹೀಗೆ ಮುಂತಾದ ಶರಣರು ತಮ್ಮ ವಚನಗಳಲ್ಲಿ ಶಿವಯೋಗಿ ಸಿದ್ಧರಾಮನ ಚಾರಿತ್ರ ಬಗ್ಗೆ ಉಲ್ಲೇಖಿಸಿದ್ದಾರೆ.
ಬಸವಣ್ಣನವರ ವಚನಗಳಲ್ಲಿ ಶಿವಯೋಗಿ ಸಿದ್ಧರಾಮ:

ಸತ್ಯ ಮುಕ್ತಿ ಕಳೆಯ ನೋಡಾ, ನಿತ್ಯತ್ವದ ಇರವ ನೋಡಾ,
ಮೂರೋಂದಾದ ಆರೂಢ ನೋಡಾ!
ಕೂಡಲ ಸಂಗಮದೇವರಲ್ಲಿ ತದ್ಗತವಾಗಿಪ್ಪ
ಮರುಳಶಂಕರದೇವರ
ನಿಲವ, ಪ್ರಭುದೇವರದು, ಸಿದ್ಧರಾಮಯ್ರದೇವರಿಂದ ಕಂಡು
ಬದುಕಿದೆನು, ಬದುಕಿದೆನು!
ಎನ್ನ ಗತಿ ನೀನೆ ಕಂಡಯ್ಯಾ,
ಎನ್ನ ಗುರು ಪರಮಗುರು ನೀನೆ ಕಂಡಯ್ಯಾ!
ಎನ್ನಂತರಂಗದ ಜ್ಯೋತಿ ನೀನೆ ಕಂಡಯ್ಯಾ!

ಕೂಡಲ ಸಂಗಮ ದೇವಾ,
ನೀನೆ ಎನಗೆ ಗುರು ನಾನೆ ನಿಮ್ಮ ಶಿಷ್ಯನೆಂಬುದ
ನಿಮ್ಮ ಶರಣ ಸಿದ್ಧರಾಮಯ್ಯದೇವರ ಬಲ್ಲರು;
ಕೃಪೆ ಮಾಡಾ ಪ್ರಭುವೆ!
ಈ ಮೇಲಿನ ವಚನಗಳಲ್ಲಿ ಶಿವಯೋಗಿ ಸಿದ್ಧರಾಮ ಚಾರಿತ್ರ ಬಸವಣ್ಣನವರ ಮೇಲೆ ಎಷ್ಟು ಪ್ರಭಾವ ಬೀರಿತ್ತು ಎಂದು ನಾನು ಅರಿಯ ಬಹುದಾಗಿದೆ. ಸತ್ಯ ಮುಕ್ತಿಯ ಕಳೆ ನೋಡಯ್ಯ ಸತ್ಯವನ್ನೆ ನುಡಿದು ಸತ್ಯ ಶುದ್ಧ ಕಾಯಕ ಮಾಡಿ ಇಡೀ ತನ್ನ ಬದುಕ್ಕನೆ ಸತ್ಯವಾಗಿಸಿರು ಪರಿಯನ್ನು ಮರುಳ ಶಂಕರ ದೇವರ ನಿಲುವು ಪ್ರಭುದೇವರು ನಿಲುವು ಸಿದ್ಧರಾಮಯ್ಯ ದೇವರಿಂದ ನಾನು ಕಲಿತು ಬದುಕಿದೆನು ಎಂಬ ವಿಚಾರವನ್ನು ವ್ಯಕ್ತಪಡಿಸಿದ್ದಾರೆ.

ಹಾಗೂ ಇನ್ನೊಂದು ವಚನದಲ್ಲಿ ಎನ್ನ ಗತಿ ನಿನರ, ಎನ್ನ ಗುರು ಪರಮ ಗುರು ನೀನೆ ಕಂಡಯ್ಯ, ಎನ್ನ ಅಂತರಂಗದ ಜ್ಯೋತಿ ನೀನು ನಿನೆ ಗುರು ನಿನೆ ಶಿಷ್ಯ ಎಂಬ ನಿಲುವನ್ನು ಹೆಳಿದ್ದಾರೆ. ಈ ಈ ಸತ್ಯ ನುಡಿಗಳನ್ನು ನಮ್ಮಂತರಂಗದಲ್ಲಿ ನವನೀತವಾಗಿ ಸತ್ಯ ಮುಕ್ತಿಯ ಬದುಕನ್ನು ಅರುಹಲು ಸಹಾಯವಾಗುತ್ತದೆ.
ಅಲ್ಲಮ ಪ್ರಭುದೇವರ ವಚನಗಳಲ್ಲಿ ಶಿವಯೋಗಿ ಸಿದ್ಧರಾಮ:
ಕಾಯದೊಳಗೆ ಕರಣವಿಲ್ಲ, ಪ್ರಾಣದೊಳಗೆ ಭಾವವವಿಲ್ಲ
ಭಾವದೊಳಗೆ ಭ್ರಮೆಯಿಲ್ಲ, ನವನಾಳದೊಳಗೆ ಸುಳುಹು
ಮುನ್ನಿಲ್ಲ
ಬ್ರಹ್ಮರಂಧ್ರದಲ್ಲಿ ಅವರತ ಶಿವಯೋಗಿ
ಗೂಹೇಶ್ವರನ ಶರಣ ಸಿದ್ಧರಾಮಯ್ಯ,
ನಿನ್ನ ಕಂಡೆನ್ನ ಭವಂ ನಾಸ್ತಿಯಾಯಿತ್ತು, ಕೇಳಾ!
ಭಕ್ತಿಯೆಂಬ ಸಮಾದಾನ ಬಸವಣ್ಣನಿಂದ ಎನಗಾಯಿತ್ತು.
ಪ್ರಸಾದವೆಂಬ ಪರಿಣಾಮ ಮರುಳಶಂಕರದೇವರಿಂದ ಎನಗಾಯಿತ್ತು.
ಏಕೋಭಾವನಿಷ್ಠೆ ಸಿದ್ಧರಾಮಯ್ಯದೇವರಿಂದ ಎನಗಾಯಿತ್ತು.
ಸರ್ವಜೀವ ಪರಿಪೂರ್ಣಕಳೆ ಚನ್ನಬಸವಣ್ಣನಿಂದ ಎನಗಾಯಿತ್ತು.
ಆದ ನಿಜದ ನೆಲೆ ಗೂಹೇಶ್ವಲಿಂಗವೆಂಬ ನಾಮವಾಯಿತ್ತು.
ಸ್ವಾನುಭಾವ ಬೆಳಗಿನಲ್ಲಿ ಒಂದು ಬೆಕ್ಕು ಹುಟ್ಟಿತ್ತು.
ಆ ಬೆಕ್ಕಿನ ತಲೆಯ ಮೇಳೆ ಒಂದು ಗಿರಿ ಹುಟ್ಟಿತ್ತು.
ಆ ಗಿರಿಯ ಮೇಳೆ ಎರಡು ರತ್ನ ಹುಟ್ಟಿದವು.
ಆ ರತ್ನ ವನಸಿ ಬರಲು, ಅವು ತನ್ನುವನವಗ್ರಹಿಸಿದವು.

ಒಂದು ರ್ನ ಅಮಗವನವಗ್ರಹಿಸಿತ್ತು;
ಮತ್ತೊಂದು ರತ್ನ ಪ್ರಾಣವನುಗ್ರಹಿಸಿತ್ತು.
ಆ ರತ್ನಂಗಳ ಫ್ರಭೆ ತಾನಾದ
ನಮ್ಮ ಗುಹೇಶ್ವರನ ಶರಣ ಸಿದ್ಧರಾಮಯ್ಯನ ನಿಲವಿಗೆ
ನಮೋ ನಮೋ ಎನುತಿರ್ದೆನಯ್ಯ ಚನ್ನಬಸವಣ್ಣಾ!
ಸ್ವಾನುಭಾವ ಇರವಿನಲ್ಲಿ ನಿಲಿಸಿ ಇವರು ಕೈಕೊಂಡ ಸಮಷ್ಟಿ ಸಾಧನೆ ಅದ್ಭುತ ಅಪೂರ್ವ ಸಿದ್ಧರಾಮ ಶಿವಯೋಗಿಯೂ ಇವರ ಸಾಲಿನಲ್ಲಿ ನಿಲ್ಲಬಲ್ಲ ವ್ಯಕ್ತಿಯಾದುದರಿಂದ, ಇವರು ಸಿದ್ಧರಾಮನ ಬಗೆಗೆ
ಹೇಳುವ ಮಾತುಗಳಿಗೆ ಮಹತ್ವವಿದೆ. ಅನುಭವ ಮಂಟಪದ ಶೂನ್ಯ ಪೀಠಾಧ್ಯಕ್ಷರಾದ ಅಲ್ಲಮ ಪ್ರಭುದೇವರ ಈ ಶಿವಾನುಭವದ ನುಡಿಗಳು ಶಿಯೋಗಿಯ ಸಿದ್ಧರಾಮನ ನೈಜ ವ್ಯಕ್ತಿತ್ವ ಹೇಗೆ ಮೂಡಿಬಂದಿದೆ ಅವನ ಪ್ರಭಾವ ಬೀರಿರುವ ಪ್ರಭಾವ ಎಷ್ಟು ಎಂಬುದು ಸಾಭಿತು ಪಡಿಸಿದ್ದಾರೆ. ಅಲ್ಲಮ ಪ್ರಭುದೇವರು ಸಾಮಾನ್ಯ ವ್ಯಕ್ತಿತ್ವನ್ನು ಹೊಂದಿದವರಲ್ಲ ಪ್ರಶ್ನಾರ್ಥಕ ಮನೋಭಾವವನ್ನು ಹೊಂದಿವರೆಂಬುದು ಅವರು ಅನುಭವ ಮಂಟಪದಲ್ಲಿ ಯಾರನ್ನೂ ಸಾಮನ್ಯವಾಗಿ ಹಾಗೆ ಕೆರೆದುಕೊಳ್ಳುತ್ತಿರಲಿಲ್ಲ ಅವರ ನ್ಶೆಜತೆಯನ್ನು ಪ್ರಶ್ನಿಸಿ ಒರೆಹಚ್ಚಿ ಅನಂತರದಲ್ಲಿ ಅವರಿಗೆ ಪ್ರವೇಶವನ್ನು ನೀಡುತ್ತಿದ್ದರು.

ಅದರಲ್ಲಿ ಅಕ್ಕ ಮಹಾದೇವಿಯ ದಿವ್ಯಾಂಬರತೆಯನ್ನು ಪ್ರಶ್ನಿಸಿರುವುದು ಅನುಭವ ಮಂಟಪಕ್ಕೊಂದು ಕಳಶಪ್ರಾಯವೆಂದರೆ ತಪ್ಪಾಗಲಾರದು. ಇಂತಹ ಘನವ್ಯಕ್ತಿತ್ವ ಹೊಂದಿದ ಅಲ್ಲಮ ಪ್ರಭುದೇವರು ಶಿವಯೋಗಿ ಸಿದ್ಧರಾಮನನ್ನು ಸಾರಿದರೂವು ಸಾಮಾನ್ಯ ಸಂಗತಿ ಅಲ್ಲ.
ಚನ್ನಬಸವಣ್ಣನವರ ವಚನಗಳಲ್ಲಿ ಶಿವಯೋಗಿ ಸಿದ್ದರಾಮ:
ಪಟವಾಕಾಶಕ್ಕಂಡಖತ್ತೆಂದೆಡೆ ಪಟಸೂತ್ರದ ಸಂಚ ಕೆಲಗಿಪ್ಪುದು ನೋಡಾ.
ವ್ಯೂಮದಲ್ಲಿ ಚರಿಸುವ ಸೋಮಸೂರ್ಯರೆಂದೆಡೆ, ಹೀಮಗಿರಿಯ ಸಂಚತಪ್ಪುದು ನೋಡಾ
ಭೂಮಿಯನೊಲ್ಲದೆ ಗಗನಕ್ಕೆ ಒಂದೆಡಿಯುಂಟೆ?
ಆ ವ್ಯೋಮದಲ್ಲಿ ನಿಲುವುದಕ್ಕೆ ಒಂದೆಡೆಯುಂಟೆ?
ನಮ್ಮ ಕೂಡಲ ಚನ್ನಸಂಗನ ಶರಣರೊಳಗಿರ್ದು
ಸೀಮೆಯ ಮೀಸಿದ ನಿಸ್ಸೀಮನು ಸಿದ್ಧರಾಮಯ್ಯನೆಂಬ ಮಾತು
ಅಂತಿರಲಯ್ಯಾ ಪ್ರಭುವೆ!

ಕಂಗಳನೋಟ ಮನದ ಕೂಟದಲ್ಲಿಯೆ
ಏಕತ್ವಭಾವದ ಲಿಂಗೈಕ್ಯದ ನಿಲವು ತನ್ನಿಂದ ತಾನೆಚಿದ ನಿಲುವು ನೋಡಾ
ಅರಿಯಲಿಲ್ಲದ ಅರಿವಿನ ತೆರವಿನ ಸಯವಾಯಿತ್ತು.
ಕೂಡಲ ಚನ್ನಸಂಗಯ್ಯನಲ್ಲಿ ಸಿದ್ಧರಾಮಯ್ಯಂಗೆ.
ಶರಣ ಸಂಗಮದಲ್ಲಿ ಚಿನ್ಮಯ ಜ್ಞಾನಿ ಚನ್ನಬಸವಣ್ಣನೋಬ್ಬನೆ ಎಂದು ಕೆರಯಿಸಿಕೊಂಡ ಚನ್ನಬಸವಣ್ಣ ಅನುಭವ ಮಂಟಪದ ಮೂರನೆ ಅಧ್ಯಕ್ಷನಾಗಿ ಮತ್ತು ಶಿವಯೋಗಿ ಸಿದ್ಧರಾಮನಿಗೆ
ಲಿಂಗದೀಕ್ಷೆಯನ್ನು ನೀಡಿರುವುದನ್ನು ನಾವು ಶೂನ್ಯ ಸಂಪಾದನೆಗಳಿಂದ ತಿಳಿದುಕೊಳ್ಳಬಹುದು. ಇಂತಹ ಜ್ಞಾನಿಯೂ ಆದ ಚನ್ನಬಸವಣ್ಣ ಶೀವಯೋಗಿ ಸಿದ್ಧರಾಮನನ್ನು ತನ್ನ ವಚನಗಳಲ್ಲಿ ಅವನ ಚರಿತ್ರೆಯನ್ನು ನಾವು ಕಾಣಬಹುದು.
ಅಕ್ಕಮಹಾದೇವಿಯ ವಚನಗಳಲ್ಲಿ ಶಿವಯೋಗಿ ಸಿದ್ಧರಾಮ:
ಬಸವಣ್ಣನ ಮನೆಯ ಮನೆಯ ಮಗಳಾಗಿ ಬದುಕಿದೆನಾಗಿ, ತನ್ನ ಕರುಣ ಭಕ್ತಿ ಪ್ರಸಾದವ ಕೊಟ್ಟನು ಚನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ, ಭಕ್ತ ಪ್ರಸಾದವ ಕೊಟ್ಟನು ಪ್ರಭುದೇವರ ತಿತ್ತಿನ ಮಗಳಾದ ಕಾರಣ, ಜ್ಞಾನ ಪ್ರಸಾದವ ಕೊಟ್ಟನು ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ, ಪ್ರಾಣ ಪ್ರಸಾದವ ಸಾಧಿಸಿ ಕೊಟ್ಟನು.
ಮಡಿವಾಳ ಮಾಚಿತಂದೆಯ ಮಗಳಾದ ಕಾರಣ ನಿರ್ಮಳ ಪ್ರಸಾದವ ನಿಶ್ಚಯಿಸಿಕೊಟ್ಟನು.

ಇಂತೀ ಅಂಸಖ್ಯಾತರೆಲ್ಲರು ತಮ್ಮ ಕರುಣದ ಕಂದನೆಂದು ರಕ್ಷಿಸಿದ ಕಾರಣ, ಚನ್ನಮಲ್ಲಿಕಾರ್ಜುನನ ಪಾದಕ್ಕೆ ಯೋಗ್ಯಳಾದೆನು.
ಮರುಳಶಂಕರ ದೇವರ ವಚನಗಳಲ್ಲಿ ಶಿವಯೋಗಿ

ಸಿದ್ಧರಾಮ:
ಎನ್ನ ಜ್ಞಾನಾತ್ಮನ ಚೇತನವಯ್ಯಾ ಪ್ರಭುದೇವರು.
ಎನ್ನ ಪರಮಾತ್ಮನ ಚೇತನವಯ್ಯಾ ಸಿದ್ಧರಾಮ್ಯದೇವರು

ಎನ್ನ ಪರಮಾತ್ಮನ ಚೇತನವಯ್ಯಾ ಸಿದ್ಧರಾಮಯ್ಯದೇವರು
ಎನ್ನ ಚಿನ್ಮಯಾತ್ಮನ ಚೇತನವಯ್ಯಾ ಷಡುಸ್ಥಲಬ್ರಹ್ಮಿ ಚನ್ನಬಸವಣ್ಣ
ಎನ್ನ ಮಹಾತ್ಮ ಚೇತನವಯ್ಯಾ ಬಸವಣ್ಣನ ನಿಜಸುಖಿ ಅಪ್ಪಣ್ಣನು
ಎನ್ನ ಜೀವಾತ್ಮ ಚೇತನವಯ್ಯಾ ಮಡಿವಾಳ ಮಾಚಯ್ಯನು.
ಎನ್ನವ ಚೇರನಾತ್ಮಕನಯ್ಯಾ ಕಿನ್ನರಿ ಬ್ರಹ್ಮಯ್ಯನು
ಇಂತಪ್ಪ ಪ್ರಮಥರ ಕರುಣದಿಂದ
ಶುದ್ಧ ನಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ,
ಶಾಂತಮಲ್ಲಿಕಾರ್ಜುನದೇವರ
ಬದುಕಿದೆನು ಕಾಣಾ ನಿಮ್ಮ ಧರ್ಮ!
ಹೀಗೆ ಮರುಳ ಶಂಕರದೇವರು, ಯೋಗಾಂಗ ತ್ರಿಪದಿಯ ದಿವ್ಯ ದಿಂಗಂಬರೆಯ ವ್ಯಕ್ತಿತ್ವವನ್ನು ಹೊಂದಿದ ಅಲ್ಲಮ ಪ್ರಭು ದೇವರಿಗೆ ದಿಟ್ಟತನದಿ ಉತ್ತರ ನೀಡಿ ಮಹಾದೇವಿ ಅಕ್ಕ ಎಂದು ಕರೆಯಿಸಿಕೊಂಡ ಶಿವ ಶರಣರ – ಶರಣೆಯರ ವಚನಗಳನ್ನು ಅಧ್ಯಯನ ಮಾಡಿದಾಗ ಅವರ ಶಿವಯೋಗಿ ಸಿದ್ಧರಾಮ ಅವರ ಮೇಲೆ ಎಂತಹ ಪ್ರಭಾವವನ್ನು ಬೀರಿದ್ದನೆಂದು ತಿಳಿಯುತ್ತದೆ. ಇಲ್ಲಿ ನಾನು
ಕೆಲವೇ ಕೆಲವು ವಚನಕಾರರ ವಚನಗಳನ್ನು ಮಾತ್ರ ಉಲ್ಲೇಖಿಸಿದೇನೆ. ಇನ್ನೂ ಶರಣ ಆದಯ್ಯ, ಶರಣ ಡಕ್ಕೆಯ ಬೊವ್ಮ್ಮಯ್ಯಗಳಂತ ಅನೇಕ ಶರಣರು ಶೀವಯೋಗಿ ಸಿದ್ಧರಾಮನ ಘನ ವ್ಯಕ್ತಿತ್ವವವನ್ನು ಸಾರಿ ಹೇಳಿದ್ದಾರೆ ಇಂತ ಒಬ್ಬ ಶರಣ ಅನೇಕ ಶಿವ ಶರಣರ ಮಾರುಗಳಲ್ಲಿ ಅಚ್ಚಳಿಯದೆ ಉಳಿದಿರುವುದು ಅವನ ನಿಜ ಚಾರಿತ್ರ ಎಂದು ಹೇಳಬಹುದು.
ಆಕರಗ್ರಂಥಗಳು
೧) ಸಮಗ್ರ ವಚನ ಸಂಪುಟ-
೨) ಸಿದ್ಧರಾಮ ಶಿವಯೋಗಿ ಜೀವನ-ಸಾಹಿತ್ಯ-ತತ್ವಜ್ಞಾನಗಳ
ವಿಮರ್ಶಾತ್ಮಕ ಅಧ್ಯಯನ
೩) ಸಿದ್ಧರಾಮ ಸಾಹಿತ್ಯ ಸಂಗ್ರಹ- ರೆವಿಡೆಂಡ್ ಉತ್ತಂಗಿ ಚನ್ನಪ್ಪ
೪) ಸೊನ್ನಲಿಗೆ ಸಿದ್ಧರಾಮ – ಚಂದ್ರಕಾಂತ ಬಿಜ್ಜರಗಿ
೫) ಶೂನ್ಯ ಸಂಪಾದನೆ – ಎಲ್. ಬಸವರಾಜು
೬) ಸಿದ್ಧರಾಮ ಚಾರಿತ್ರ. – ರಾಘವಾಂಕ.

ಪ್ರೋ. ನಾನಾಸಾಹೇಬ ಎಸ್.ಹಚ್ಚಡದ
ಸಹಾಯಕ ಪ್ರಾಧ್ಯಾಪಕರು,
ಕನ್ನಡ ಅಧ್ಯಯನ ಹಾಗೂ
ಸಂಶೋಧನಾ ವಿಭಾಗ
ಶರಣಬಸವ ವಿಶ್ವವಿದ್ಯಾಲಯ,
ಕಲಬುರಗಿ