ಶಿವಮೊಗ್ಗ : 3 ಕಡೆ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 51 ಕೋಟಿ ರೂ. ಮಂಜೂರು


ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಆ. 25: ಶಿವಮೊಗ್ಗ ನಗರದ ಎರಡು ಕಡೆ ಹಾಗೂ ಭದ್ರಾವತಿ ಪಟ್ಟಣದ ಒಂದು ಕಡೆ ಸೇರಿದಂತೆ ಒಟ್ಟು ಮೂರು ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಅಗತ್ಯ ಅನುದಾನ ಬಿಡುಗಡೆಗೆ ಸಮ್ಮತಿಸಿದೆ.
ಇದರಿಂದ, ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕೆಂಬ ನಾಗರೀಕರ ಬಹು ದಿನಗಳ ಬೇಡಿಕೆ ಕಾರ್ಯರೂಪಕ್ಕೆ ಬರುವಂತಾಗಿದೆ. ಕೇಂದ್ರ ರೈಲ್ವೆ ಇಲಾಖೆ ಸಹಭಾಗಿತ್ವದಲ್ಲಿ ಮೇಲ್ಸೇತುವೆಗಳ ರ್ಮಾಣವಾಗಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ.
ಎಲ್ಲೆಲ್ಲಿ?: ಶಿವಮೊಗ್ಗ ನಗರದ ಸೋಮಿನಕೊಪ್ಪ ಮುಖ್ಯ ರಸ್ತೆಯ ಕಾಶೀಪುರ ರೈಲ್ವೆ ಗೇಟ್, ಬಸವೇಶ್ವರ ನಗರದ ಬಳಿಯ ಸವಳಂಗ ರಸ್ತೆ ಹಾಗೂ ಭದ್ರಾವತಿ ಪಟ್ಟಣದ ಕಡದಕಟ್ಟೆ ಬಳಿಯ ಬಿ.ಹೆಚ್.ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆಗಳು ನಿರ್ಮಾಣವಾಗಲಿದೆ.
ಕಳೆದ ಹಲವು ತಿಂಗಳುಗಳ ಹಿಂದೆಯೇ, ರೈಲ್ವೆ ಹಾಗೂ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಫ್ಲೈ ಓವರ್ ನಿರ್ಮಾಣವಾಗಲಿರುವ ಸ್ಥಳಗಳ ಪರಿಶೀಲನೆ ನಡೆಸಿದ್ದರು. ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು.
ಈ ನಡುವೆ ಎದುರಾದ ಕೊರೊನಾ ಹಾಗೂ ಲಾಕ್ಡೌನ್ ಕಾರಣದಿಂದ, ರಾಜ್ಯ ಸರ್ಕಾರದಿಂದ ಅನುಮೋದನೆ ದೊರಕುವುದು ವಿಳಂಬವಾಗಿತ್ತು. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಫ್ಲೈ ಓವರ್ ನಿರ್ಮಾಣಕ್ಕೆ ಹಸಿರು ನಿಶಾನೆ ನೀಡಿದ್ದಾರೆ. ಅನುದಾನ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ಕಲ್ಪಿಸಿದ್ದಾರೆ.
ಅನುದಾನವೆಷ್ಟು?: ಶಿವಮೊಗ್ಗದ ಕಾಶೀಪುರ ರೈಲ್ವೆ ಗೇಟ್ ಬಳಿಯ ಫ್ಲೈ ಓವರ್ಗೆ 15.31 ಕೋಟಿ ರೂ., ಸವಳಂಗ ರಸ್ತೆಗೆ 21.68 ಕೋ. ರೂ. ಹಾಗೂ ಭದ್ರಾವತಿ ಕಡದಕಟ್ಟೆ ಬಳಿಯ ಫ್ಲೈ ಓವರ್ ನಿರ್ಮಾಣಕ್ಕೆ 13.46 ಕೋಟಿ ರೂ. ಮಂಜೂರಾತಿಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ಕಲ್ಪಿಸಿದೆ.
ತಪ್ಪಲಿದೆ ತೊಂದರೆ: ಸದ್ಯ ಈ ಮೂರು ರೈಲ್ವೆ ಗೇಟ್ ಗಳು ನಗರ ವ್ಯಾಪ್ತಿಯಲ್ಲಿವೆ. ಭಾರೀ ಪ್ರಮಾಣದ ಜನ-ವಾಹನ ಸಂಚಾರವಿದೆ. ರೈಲುಗಳ ಓಡಾಟದ ವೇಳೆ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುವುದು ಸರ್ವೇಸಾಮಾನ್ಯವಾಗಿದೆ. ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ವಾಹನ ಸವಾರರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ಈ ಎಲ್ಲ ಕಾರಣಗಳಿಂದ, ಈ ಸ್ಥಳದಲ್ಲಿ ಫ್ಲೈ ಓವರ್ ನಿರ್ಮಿಸಬೇಕೆಂಬ ಬೇಡಿಕೆಯಿತ್ತು. ಆದರೆ ಕೇಂದ್ರ ರೈಲ್ವೆ ಇಲಾಖೆ ಇತ್ತ ಗಮನಹರಿಸಿರಲಿಲ್ಲ. ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರ ಇಚ್ಛಾಶಕ್ತಿಯ ಫಲವಾಗಿ ಫ್ಲೈ ಓವರ್ಗಳ ನಿರ್ಮಾಣಕ್ಕೆ ಒತ್ತು ಸಿಗುವಂತಾಗಿದೆ.