ಶಿವಮೊಗ್ಗ ಸ್ಮಾರ್ಟ್ ಸಿಟಿ ಅಕ್ರಮ ತನಿಖೆ  ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ’

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಸೆ.25: ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ನಗರದಲ್ಲಿ ಸರಿಸುಮಾರು 900 ಕೋಟಿ ರೂ.ಗಳಿಗೂ ಅಧಿಕ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಇತ್ತೀಚೆಗೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದ ಬೆನ್ನಲ್ಲೇ, ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆಸ್ಮಾರ್ಟ್ ಸಿಟಿ ಅಡಿ ಯೋಜನೆಯಡಿ ಅನುಷ್ಠಾನಗೊಳಿಸಲಾಗಿರುವ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ತರಹದ ಆಕ್ಷೇಪಣೆಯಿದೆ. ಸದರಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಬೇಕು. ಗುಣಮಟ್ಟ ಸರಿಯಾಗಿದ್ದಲ್ಲಿ ಮಾತ್ರ ಅನುದಾನ ಬಿಡುಗಡೆ ಮಾಡಬೇಕು’ ಸಚಿವ ಮಧು ಎಸ್ ಬಂಗಾರಪ್ಪ ಅವರು ಸ್ಮಾರ್ಟ್ಸಿಟಿ ವ್ಯವಸ್ಥಾಪಕ ಮಾಯಣ್ಣಗೌಡ ಅವರಿಗೆ ಖಡಕ್ ಸೂಚನೆ ರವಾನಿಸಿದ್ದಾರೆ.ಶಿವಮೊಗ್ಗ ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ಮಾರ್ಟ್ ಸಿಟಿ ಯೋಜನೆ, ಸರ್ಕಾರಿ ಮೆಗ್ಗಾನ್ ಆಸ್ಪತ್ರೆ, ಪ್ರವಾಸೋದ್ಯಮ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿದ್ಯುತ್ ಹಾಗೂ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸ್ಮಾರ್ಟ್ ಸಿಟಿ ಯೋಜನೆಯಡಿ ಅಪೂರ್ಣವಾಗಿರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಬಾರದು. ಮಹಾನಗರಪಾಲಿಕೆ ಆವರಣದಲ್ಲಿ ಅನುಮತಿ ಇಲ್ಲದೆ ಕಾಮಗಾರಿ ನಡೆಸಲಾಗಿದೆ. ವಿವಿಧ ಬಡಾವಣೆಗಳಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗಿದೆ. ಇನ್ನೂ ಕೆಲವು ಸ್ಥಳಗಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಹಣ ವಿನಿಯೋಗ ಮಾಡಿರುವುದು ಕಂಡು ಬಂದಿದೆ.ಅವೈಜ್ಞಾನಿಕವಾಗಿ ಮಾಡಲಾಗಿರುವ ಪುಟ್ಬಾತ್ ಕಾಮಗಾರಿಯಿಂದಾಗಿ ಮಳೆನೀರು ನಿಂತು ಜನಸಾಮಾನ್ಯರಿಗೆ, ಪಾದಚಾರಿಗಳಿಗೆ, ವಾಹನ ಚಾಲಕರಿಗೆ ತೀವ್ರ  ತರಹದ ಅಡಚಣೆ ಉಂಟಾಗುತ್ತಿದೆ. ಸ್ಟೇಡಿಯಂ ಸುತ್ತಲೂ ನಿರ್ಮಾಣಗೊಂಡಿರುವ ವಾಕಿಂಗ್‌ ಪಾತ್ ಕಾಮಗಾರಿ ಅವೈಜ್ಞಾನಿಕವಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದೂರುಗಳಿವೆ ಎಂದು ಸಚಿವರು ತಿಳಿಸಿದರು.ಇಂತಹ ಅನೇಕ ಯೋಜನೆಗಳ ಅನುಷ್ಟಾನದಿಂದಾಗಿ ಯೋಜನೆಯ ಆರಂಭದಿಂದ  ಮುಕ್ತಾಯ ಹಂತದವರೆಗೂ ಜನ ಕಿರಿಕಿರಿ ಅನುಭವಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಸದರಿ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ  ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಖಡಕ್ ಎಚ್ಚರಿಕೆ: ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಮುದ್ದಣ್ಣನಕೆರೆಯ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿದ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ ಅವರು ಆಡಳಿತ ವ್ಯವಸ್ಥೆಯಲ್ಲಿ ತಲೆತೂರಿಸುವ ವ್ಯಕ್ತಿಗಳು ಹಾಗೂ ಅದರಲ್ಲಿ ಶಾಮಿಲಾಗಿರುವ ವ್ಯಕ್ತಿಗಳ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬರ ಪರಿಸ್ಥಿತಿ : ರಾಜ್ಯದಲ್ಲಿ ಬರ ಘೋಷಣೆಯಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಸಮೀಕ್ಷೆ  ನಡೆಸಿ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಬೆಳೆ ಪರಿಹಾರ ಸಮೀಕ್ಷೆಯಲ್ಲಿ ಮಾನವೀಯ ಆಧಾರದ ಮೇಲೆ ರೈತರಿಗೆ ಅನುಕೂಲ ವಾಗುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಪ್ರಸಕ್ತ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಸಕಾಲಿಕ ಹಾಗೂ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ  ಗ್ರಾಮೀಣ ಕುಡಿಯುವ ನೀರು ಮತ್ತು ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಇಲಾಖೆಯ ಅಭಿಯಂತರರು ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಸಚಿವರು ಮೆಸ್ಕಾಂ ಅಧೀಕ್ಷಕರಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ  ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.