ಶಿವಮೊಗ್ಗ ಸೈಕಲ್ ಕ್ಲಬ್‌ನಿಂದ ರಕ್ತದಾನ ಶಿಬಿರ

ಶಿವಮೊಗ್ಗ.ನ.೩; ರಕ್ತದಾನ ಮಹಾದಾನ ರಕ್ತದಾನ ಜೀವದಾನ ನಾವು ಮಾಡುವ ರಕ್ತದಾನದಿಂದ ಮತ್ತೊಬ್ಬರ ಪುಣ್ಯ ಉಳಿಸಿದ ಪುಣ್ಯ ಲಭಿಸುತ್ತದೆ. ಹಾಗೆ ನಮ್ಮ ದೇಹ ಸದೃಢವಾಗುವುದರ ಜೊತೆಗೆ ಸದಾ ಉತ್ಸಾಹದಿಂದ ಇರಲು ಸಹಕಾರಿಯಾಗುತ್ತದೆ ಎಂದು ನಂಜಪ್ಪ ಆಸ್ಪತ್ರೆಯ ಖ್ಯಾತ ಕ್ಯಾನ್ಸರ್‌ರೋಗ ತಜ್ಞರಾದ ಡಾ. ಅಪರ್ಣಶ್ರೀವತ್ಸ ನುಡಿದರು. ಅವರು ಇಂದು ಬೆಳಿಗ್ಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಿವಮೊಗ್ಗ ಸೈಕಲ್ ಕ್ಲಬ್‌ನವರು ಸವಳಂಗ ರಸ್ತೆಯಲ್ಲಿರುವ ಸೈಕಲ್ ಲೋಕದಲ್ಲಿ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಕೋವಿಡ್ ಸಮಯದಲ್ಲಿ ಪ್ರತಿನಿತ್ಯ ಅನೇಕ ರೋಗಿಗಳು ರಕ್ತಸಿಗದೆ ಪರದಾಡುತ್ತಿದ್ದಾರೆ. ಇಂದು ಶೇ. ೪೦% ರಕ್ತದ ಕೊರತೆ ಇದೆ.

ಆದ್ದರಿಂದ ಯುವಕರು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡೋಣ ಎಂದು ನುಡಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಸೈಕಲ್‌ಕ್ಲಬ್‌ನ ಅಧ್ಯಕ್ಷ ಶ್ರೀಕಾಂತ ಅಧ್ಯಕ್ಷತೆ ವಹಿಸಿ ಈಗಾಗಲೆ ಶಿವಮೊಗ್ಗ ಸೈಕಲ್ ಕ್ಲಬ್ ಸ್ಥಾಪನೆ ಆದಾಗಿನಿಂದ ವರ್ಷಕ್ಕೆ ೨ ಬಾರಿ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿದ್ದೇವೆ. ಹಾಗೂ ನಿರಂತರವಾಗಿ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ನುಡಿದ ಅವರು ದಾನಿಗಳನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ೪೦ ಜನ ರಕ್ತದಾನ ಮಾಡಿದರು. ಶಿಬಿರದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕರಾದ ಜಿ.ವಿಜಯಕುಮಾರ್, ಡಾ. ಶ್ರೀವತ್ಸ, ಡಾ. ಗುಡದಪ್ಪಕಸಬಿ, ನರಸಿಂಹಮೂರ್ತಿ, ಸುರೇಶ್, ರವಿ, ಸಂಜಯ್, ಹರೀಶ್‌ಪಟೇಲ್, ನಾಗರಾಜ ಎಂ.ಪಿ, ದಿಲೀಪ್‌ನಾಡಿಗ್, ಮುರಳಿ ಎಂ. ಹಾಗೂ ಸೈಕಲ್‌ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.