ಶಿವಮೊಗ್ಗ : ಸಿಎಂ ಕಚೇರಿಯಿರುವ ಕಟ್ಟಡದ ಶೌಚಾಲಯ ಕೊಠಡಿಗಳ ದುರವಸ್ಥೆ!

ಶಿವಮೊಗ್ಗ, ಎ. 16: ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ಶೌಚಾಲಯ ಕೊಠಡಿಗಳು, ಅಕ್ಷರಶಃ ಕೊಳೆತು ನಾರುತ್ತಿವೆ. ಕಸದ ತೊಟ್ಟಿಯಾಗಿ ಪರಿವರ್ತಿತವಾಗಿದ್ದು, ರೋಗ-ರುಜುನ ಹರಡುವ ತಾಣವಾಗಿ ಮಾರ್ಪಟ್ಟಿವೆ! 
ಕಳೆದ ಹಲವು ತಿಂಗಳುಗಳಿಂದ ಈ ದುಃಸ್ಥಿತಿಯಿದೆ. ನೀರು ಪೂರೈಕೆಯೂ ಆಗುತ್ತಿಲ್ಲ. ಆದರೆ ದುರಸ್ತಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಲಾಗಿದೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. 
ಈ ಕಟ್ಟಡ ಸಂಕೀರ್ಣದಲ್ಲಿ ಮುಖ್ಯಮಂತ್ರಿ ಕಚೇರಿ, ಲೋಕಸಭಾ, ವಿಧಾನ ಪರಿಷತ್ ಸದಸ್ಯರ ಕಚೇರಿಗಳಿವೆ. ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಹಲವು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. 
ನೂರಾರು ನೌಕರರು ಕರ್ತವ್ಯ ನಿರ್ವಹಿಸುತ್ತಾರೆ. ನಾನಾ ಕೆಲಸಕಾರ್ಯ ನಿಮಿತ್ತ ಪ್ರತಿನಿತ್ಯ ಭಾರೀ ಸಂಖ್ಯೆಯ ನಾಗರೀಕರು ಈ ಕಟ್ಟಡಕ್ಕೆ ಎಡತಾಕುತ್ತಾರೆ. ಆದರೆ ಶೌಚಾಲಯ ಅವ್ಯವಸ್ಥೆಯಿಂದ ಸಾರ್ವಜನಿಕರು ಮಾತ್ರವಲ್ಲದೆ, ಸಿಬ್ಬಂದಿಗಳು ಕೂಡ ಸಂಕಟ ಪಡುವಂತಾಗಿದೆ.
ಹಲವು ಮಹತ್ವದ ಕಚೇರಿಗಳಿರುವ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಶೌಚಾಲಯ ಕೊಠಡಿಗಳ ದುರವಸ್ಥೆ ಸರಿಪಡಿಸಲು ಇನ್ನಾದರೂ ಆಡಳಿತ ಗಮನ ಹರಿಸಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.