ಶಿವಮೊಗ್ಗ – ಸಾಗರ ತಾಲೂಕುಗಳಲ್ಲಿ ನೂರಾರು ಜನ ಆಸ್ಪತ್ರೆಗೆ ದಾಖಲು!

ಶಿವಮೊಗ್ಗ, ನ. 13: ಖಾಸಗಿ ಸಮಾರಂಭಗಳಲ್ಲಿ ಊಟ ಮಾಡಿದ್ದ ನೂರಾರು ಜನರು ವಾಂತಿ-ಬೇಧಿ,
ಹೊಟ್ಟೆ ನೋವು, ಚಳಿ, ಜ್ವರದಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ
ಚಿಕಿತ್ಸೆ ಪಡೆದ ಘಟನೆ ಕಳೆದೆರೆಡು ದಿನಗಳಿಂದ ಶಿವಮೊಗ್ಗ ಹಾಗೂ ಸಾಗರ ತಾಲೂಕುಗಳಲ್ಲಿ
ನಡೆದಿದೆ.
ಶಿವಮೊಗ್ಗ ವರದಿ: ತಾಲೂಕಿನ ಹರಮಘಟ್ಟ ಆಲದಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ
ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಊಟ ಮಾಡಿದ್ದ ನೂರಾರು ಜನರ ಆರೋಗ್ಯದಲ್ಲಿ
ಶುಕ್ರವಾರ ಏರುಪೇರು ಉಂಟಾಗಿದೆ.
ಅನಾರೋಗ್ಯಕ್ಕೆ ತುತ್ತಾದವರು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ,
ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಸಮೀಪದ ಖಾಸಗಿ ಆಸ್ಪತ್ರೆಗಳಿಗೆ
ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಆರೋಗ್ಯ ಇಲಾಖೆಯ ಪ್ರಾಥಮಿಕ ಹಂತದ ಪರಿಶೀಲನೆ ಅನುಸಾರ, ಕಲುಷಿತ ನೀರು ಸೇವನೆಯೇ
ಅಸ್ವಸ್ಥತೆಗೆ ಕಾರಣವೆಂದು ಹೇಳಲಾಗುತ್ತಿದೆ. ಪೂರ್ಣ ವರದಿಯ ನಂತರವಷ್ಟೆ, ಸ್ಪಷ್ಟ
ಕಾರಣ ತಿಳಿದುಬರಬೇಕಾಗಿದೆ.
ಸಾಗರ ವರದಿ: ತಾಲೂಕಿನ ಜೋಗ, ಕಾರ್ಗಲ್, ಲಿಂಗನಮಕ್ಕಿ ಸುತ್ತಮುತ್ತಲಿನ
ಗ್ರಾಮಗಳಲ್ಲಿಯೂ ನೂರಾರು ಜನರು ವಾಂತಿ, ಬೇಧಿ, ಚಳಿ, ಜ್ವರ ಕಾರಣಗಳಿಂದ ಸಾಗರ ಉಪ
ವಿಭಾಗೀಯ ಆಸ್ಪತ್ರೆ ಹಾಗೂ ಕಾರ್ಗಲ್ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ
ಪಡೆದುಕೊಂಡಿದ್ದಾರೆ. ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಖಾಸಗಿ ಸಮಾರಂಭಗಳಲ್ಲಿ ಭಾಗಿಯಾಗಿದ್ದವರು ಹಾಗೂ ಡಾಬಾವೊಂದರಲ್ಲಿ ಊಟ ಮಾಡಿದ್ದವರಲ್ಲಿ,
ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಆಸ್ಪತ್ರೆಗಳಲ್ಲಿ ಸೂಕ್ತ ಔಷಧೋಪಚಾರ ವ್ಯವಸ್ಥೆ
ಮಾಡಲಾಗಿದೆ ಎಂದು ಸಾಗರ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.