ಶಿವಮೊಗ್ಗ ಸರ್ಕಾರಿ ಶಾಲೆಯಲ್ಲಿ ಆರಂಭವಾಗದ ಬಿಸಿಯೂಟ

ಶಿವಮೊಗ್ಗ, ಸೆ. ೧೩: ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಶಿವಮೊಗ್ಗ ನಗರದ ಸರ್ಕಾರಿ ಶಾಲೆಯೊಂದರ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರವಿರಲಿ, ಶಾಲೆ ಆರಂಭವಾಗಿ ನಾಲ್ಕು ತಿಂಗಳಾಗುತ್ತಾ ಬಂದರೂ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯೇ ಆರಂಭವಾಗಿಲ್ಲ..!

ಹೌದು. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ೧ ನೇ ವಾರ್ಡ್ ಸೋಮಿನಕೊಪ್ಪದಲ್ಲಿರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಇಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ಬಿಸಿಯೂಟ ಪ್ರಾರಂಭಿಸಿಲ್ಲ. ಇದರಿಂದ ಬಡ ? ಮಧ್ಯಮ ವರ್ಗದ ಮಕ್ಕಳು ತಮ್ಮ ನ್ಯಾಯಬದ್ಧ ಹಕ್ಕಿನಿಂದ ವಂಚಿತವಾಗುವಂತಾಗಿದೆ.

ಕೋಟಿ ರೂ. ವೆಚ್ಚದ ಕಟ್ಟಡ: ಸದರಿ ಶಾಲೆಯ ಮೇಲುಸ್ತುವಾರಿಯನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನೋಡಿಕೊಳ್ಳುತ್ತಿದೆ. ಸರಿಸುಮಾರು ೨ ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಕಟ್ಟಡ ಕೂಡ ನಿರ್ಮಿಸಲಾಗಿದೆ. ಕಳೆದ ೪ ತಿಂಗಳ ಹಿಂದೆ ಲಷ್ಕರ್ ಮೊಹಲ್ಲಾದಿಂದ ನೂತನ ಕಟ್ಟಡಕ್ಕೆ ಶಾಲೆ ಸ್ಥಳಾಂತರಗೊಂಡಿದೆ.

೬ ರಿಂದ ೧೦ ನೇ ತರಗತಿಯಿದ್ದು, ಸರಿಸುಮಾರು ೧೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ. ಶಿವಮೊಗ್ಗ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಬಡ, ಮಧ್ಯಮ, ಕೂಲಿಕಾರ್ಮಿಕ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಸೌಲಭ್ಯವಿದೆ: ಶಾಲೆಯಲ್ಲಿ ಬಿಸಿಯೂಟ ಆರಂಭಕ್ಕೆ ಅಗತ್ಯವಾದ ಕೊಠಡಿ ವ್ಯವಸ್ಥೆ ಸೇರಿದಂತೆ ಸೌಲಭ್ಯವಿದೆ. ಈಗಾಗಲೇ ಅಕ್ಷರ ದಾಸೋಹ ಅಧಿಕಾರಿಗಳು ಶಾಲೆಗೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಆದರೆ ಇಲ್ಲಿಯವರೆಗೂ ಬಿಸಿಯೂಟ ವ್ಯವಸ್ಥೆ ಮಾತ್ರ ಆರಂಭವಾಗಿಲ್ಲ.

ಶಿಕ್ಷಣ ಸಚಿವರ ತವರೂರಲ್ಲಿಯೇ ಕಳೆದ ನಾಲ್ಕು ತಿಂಗಳುಗಳಿಂದ ಸರ್ಕಾರಿ ಶಾಲೆ ಮಕ್ಕಳು ಬಿಸಿಯೂಟ ವ್ಯವಸ್ಥೆಯಿಂದ ವಂಚಿತರಾಗಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ. ಇನ್ನಾದರೂ ಇತರೆ ಸರ್ಕಾರೆ ಶಾಲೆಗಳಲ್ಲಿನ ಮಕ್ಕಳಿಗೆ ಲಭ್ಯವಾಗುತ್ತಿರುವ ಬಿಸಿಯೂಟ, ಪೌಷ್ಠಿಕಾಂಶಯುಕ್ತ ಆಹಾರ ನೀಡಿಕೆ ವ್ಯವಸ್ಥೆಯನ್ನು ಸದರಿ ಶಾಲೆಯಲ್ಲಿಯೂ ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.