ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತೀರ್ಣಕ್ಕೆ ಚಿತ್ತ ಹರಿಸದ ರಾಜ್ಯ ಸರ್ಕಾರ!


ಶಿವಮೊಗ್ಗ, ನ. ೧೭: ರಾಜ್ಯದಲ್ಲಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಎರಡನೇ ಹಂತದ ನಗರಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ನಗರದಂಚಿನಲ್ಲಿರುವ ಕೆಲ ಹಳ್ಳಿಗಳು ಉಪ ನಗರಗಳ ರೀತಿ ಅಭಿವೃದ್ದಿ ಹೊಂದುತ್ತಿವೆ. ಆದರೆ ನಗರದ ಬೆಳವಣಿಗೆಗೆ ಅನುಗುಣವಾಗಿ ಮೂಲಸೌಕರ್ಯಗಳು ಅಭಿವೃದ್ದಿಯಾಗುತ್ತಿಲ್ಲ.ಹೌದು. ನಗರ-ಪಟ್ಟಣ ಪ್ರದೇಶಗಳ ಬೆಳವಣಿಗೆ, ಜನಸಂಖ್ಯೆಗೆ ಅನುಗುಣವಾಗಿ ಸ್ಥಳಿಯಾಡಳಿತಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಅದರಂತೆ ಕಳೆದ ಕೆಲ ವರ್ಷಗಳ ಹಿಂದೆ, ಶಿವಮೊಗ್ಗ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಸರ್ಕಾರ ಮೇಲ್ದರ್ಜೆಗೇರಿಸಿದೆ. ಆದರೆ ನಗರ ಬೆಳವಣಿಗೆ, ಜನಸಂಖ್ಯೆಗೆ ಅನುಗುಣವಾಗಿ ನಗರದ ವ್ಯಾಪ್ತಿ ವಿಸ್ತಿರಿಸುವ ಕಾರ್ಯ ಮಾತ್ರ ನಡೆಯಲಿಲ್ಲ. ಜನಪ್ರತಿನಿಧಿಗಳು ಕೂಡ ಆಸಕ್ತಿ ವಹಿಸಲಿಲ್ಲ. ಈ ಹಿಂದಿದ್ದ ನಗರಸಭೆ ವ್ಯಾಪ್ತಿಯನ್ನೇ ಉಳಿಸಿಕೊಂಡು, ಪಾಲಿಕೆ ರಚಿಸಲಾಯಿತು. ೩೫ ವಾರ್ಡ್‌ಗಳನ್ನೇ ಉಳಿಸಿಕೊಳ್ಳಲಾಯಿತು.ಇದರಿಂದ ನಗರದಂಚಿನಲ್ಲಿ ಅಭಿವೃದ್ದಿ ಹೊಂದುತ್ತಿರುವ ಗ್ರಾಮಗಳು, ಹತ್ತು ಹಲವು ಹೊಸ ಬಡಾವಣೆಗಳು, ಕೈಗಾರಿಕಾ ಪ್ರದೇಶಗಳು ಮೂಲಸೌಕರ್ಯ ಮತ್ತೀತರ ಸಮಸ್ಯೆಗಳಿಂದ ಬಳಲುವಂತಾಗಿದೆ. ಸೀಮಿತ ಸಂಪನ್ಮೂಲ, ಸಿಬ್ಬಂದಿಗಳ ಅಲಭ್ಯತೆ, ಹೆಚ್ಚುತ್ತಿರುವ ಕಾರ್ಯಭಾರ ಮತ್ತೀತರ ಕಾರಣಗಳಿಂದ ಗ್ರಾಮ ಪಂಚಾಯ್ತಿ ಆಡಳಿತಗಳಿಗೂ ಮೂಲಸೌಲಭ್ಯ ಕಲ್ಪಿಸಲು ಸಾಧ್ಯವಾಗದಂತಾಗಿದೆ. ಇದರಿಂದ ನಾಗರೀಕರು ತೊಂದರೆ ಅನುಭವಿಸುವಂತಾಗಿದೆ. ಕನಿಷ್ಠ ಮೂಲಸೌಕರ್ಯಗಳಿಗೂ ಪರದಾಡುವಂತಹ ಸ್ಥಿತಿಯಿದೆ.
ಅಭಿವೃದ್ದಿ: ಹೊರವಲಯ ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ. ದೇವಾಕಾತಿಕೊಪ್ಪ-ಸಿದ್ಲಿಪುರದಲ್ಲಿ ಕೈಗಾರಿಕಾ ಸಂಕೀರ್ಣ ಅಭಿವೃದ್ದಿಗೊಳಿಸಲಾಗಿದೆ. ಕೋಟೆಗಂಗೂರು ಗ್ರಾಮದಲ್ಲಿ ರೈಲ್ವೆ ಕೋಚಿಂಗ್ ಘಟಕ, ಸ್ಯಾಟಲೈಟ್ ರೈಲ್ವೆ ಕೇಂದ್ರಕ್ಕೆ ಕ್ರಮಕೈಗೊಳ್ಳಲಾಗಿದೆ. ಗೋವಿಂದಾಪುರ-ಅನುಪಿನಕಟ್ಟೆ ಬಳಿ ಸಾವಿರಾರು ಆಶ್ರಯ ಯೋಜನೆ ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಬ್ಬಲಗೆರೆ, ಗೆಜ್ಜೇನಹಳ್ಳಿ, ಶ್ರೀರಾಂಪುರ, ನಿಧಿಗೆ, ಗೋಂಧಿಚಟ್ನಳ್ಳಿ, ಚೆನ್ನಾಮುಂಭಾಪುರ ಸೇರಿದಂತೆ ನಗರದಂಚಿನಲ್ಲಿರುವ ಹಲವು ಗ್ರಾಮಗಳಲ್ಲಿ ಸಾಲುಸಾಲು ಹೊಸ ಬಡಾವಣೆಗಳು, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಬಂಧಿತ ಚಟುವಟಿಕೆಗಳು ಅಭಿವೃದ್ದಿಯಾಗುತ್ತಿವೆ.
ಆದರೆ ಗ್ರಾಮ ಪಂಚಾಯ್ತಿ ಆಡಳಿತಗಳಿಂದ ಹೊಸ ಬಡಾವಣೆಗಳಿಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಲು ಆಗುತ್ತಿಲ್ಲವಾಗಿದೆ. ಈ ಕಾರಣದಿಂದ ರಾಜ್ಯ ಸರ್ಕಾರವು ವೈಜ್ಞಾನಿಕವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಿಸಬೇಕು. ನಗರದಂಚಿನ ಗ್ರಾಮಗಳು, ಹೊಸ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು. ಪಾಲಿಕೆ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಬೇಕು.
ಈ ಮೂಲಕ ನಗರದ ಸರ್ವಾಂಗೀಣ ಅಭಿವೃದ್ದಿ-ಬೆಳವಣಿಗೆಯತ್ತ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆದ್ಯ ಗಮನಹರಿಸಬೇಕಾಗಿದೆ ಎಂಬುವುದು ನಾಗರೀಕರ ಆಗ್ರಹವಾಗಿದೆ.