ಶಿವಮೊಗ್ಗ – ಭದ್ರಾವತಿ ಪೊಲೀಸ್ ಕಮೀಷನರೇಟ್  : ಇಚ್ಛಾಶಕ್ತಿ ಪ್ರದರ್ಶಿಸುವರೇ ಗೃಹ ಸಚಿವರು?

ಶಿವಮೊಗ್ಗ, ಜ. 18: ದಶಕದ ಹಿಂದಿನ ಬೇಡಿಕೆಯಾದ ಶಿವಮೊಗ್ಗ ಭದ್ರಾವತಿ ಪೊಲೀಸ್
ಕಮೀಷನರೇಟ್ ಕಚೇರಿ ಸ್ಥಾಪನೆ, ಸದ್ಯ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಈ
ನಿಟ್ಟಿನಲ್ಲಿ ಜಿಲ್ಲೆಯವರೇ ಆದ ಗೃಹ  ಸಚಿವ ಆರಗ ಜ್ಞಾನೇಂದ್ರ ಅವರು ಇಚ್ಛಾಶಕ್ತಿ
ಪ್ರದರ್ಶಿಸಬೇಕಾಗಿದೆ!ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ
ಸಂದರ್ಭದಲ್ಲಿ, ಪೊಲೀಸ್ ಕಮೀಷನರೇಟ್ ಸ್ಥಾಪನೆಗೆ ಕೇಂದ್ರ ಸರ್ಕಾರ ನಿದಿಗೊಳಿಸಿರುವ
ಕೆಲ ಮಾನದಂಡಗಳ ಕೊರತೆಯಾಗುತ್ತದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಶಿವಮೊಗ್ಗ ನಗರಕ್ಕೆ ಸೀಮಿತವಾಗಿ ಕಮೀಷನರೇಟ್ ಅನುಷ್ಠಾನಕ್ಕೆ ಮಾನದಂಡಗಳು
ಅಡ್ಡಿಯಾದರೆ, ಹುಬ್ಬಳ್ಳಿ, ಧಾರವಾಡ ನಗರಗಳ ಮಾದರಿಯಲ್ಲಿ, ಶಿವಮೊಗ್ಗ ಭದ್ರಾವತಿ
ನಗರಗಳೆರೆಡನ್ನೂ ಒಳಗೊಂಡಂತೆ ಕಮೀಷನರೇಟ್ ಜಾರಿಗೊಳಿಸಬಹುದಾಗಿದೆ ಎಂದು ನಾಗರೀಕರು
ರಾಜ್ಯ ಸರ್ಕಾರಕ್ಕೆ ಸಲಹೆ ನೀಡುತ್ತಾರೆ.
ಈ ನಿಟ್ಟಿನಲ್ಲಿ ಪ್ರಬಲ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಎಲ್ಲದಕ್ಕಿಂತ
ಮುಖ್ಯವಾಗಿ ಜಿಲ್ಲೆಯವರೇ ಆದ ಗೃಹ ಸಚಿವ ಆರಗ ಜ್ಞಾನೇಂದ್ರರವರು ಮುಖ್ಯಮಂತ್ರಿಗಳ ಜೊತೆ
ಸಮಾಲೋಚಿಸಿ, ಕಮೀಷನರೇಟ್ ಸ್ಥಾಪನೆಯತ್ತ ಆದ್ಯ ಗಮನಹರಿಸಬೇಕಾಗಿದೆ.
ಈ ಮೂಲಕ ತಮ್ಮ ಅಧಿಕಾರಾವಧಿಯಲ್ಲಿ ಜನಮಾನಸದಲ್ಲಿ ಹಾಗೂ ಜಿಲ್ಲೆಯ ಆಡಳಿತ ವ್ಯವಸ್ಥೆಯ
ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಕಾರ್ಯ ಮಾಡಬೇಕಾಗಿದೆ ಎಂಬುವುದು ನಾಗರೀಕರ
ಆಗ್ರಹವಾಗಿದೆ.
ಏರುತ್ತಿರುವ ಕ್ರೈಂ:  ರಾಜ್ಯದಲ್ಲಿ ಅತೀ ಹೆಚ್ಚು ಅಪರಾಧ ಪ್ರಕರಣಗಳು ವರದಿಯಾಗುವ
ನಗರಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ಕೋಮು ಸೂಕ್ಷ್ಮ ಪ್ರದೇಶ ಕೂಡ ಆಗಿದೆ. ಪ್ರಸ್ತುತ
ನಗರ ಬೆಳವಣಿಗೆ, ಜನಸಂಖ್ಯೆ, ವರದಿಯಾಗುತ್ತಿರುವ ಕ್ರೈಂ ಪ್ರಮಾಣ ಗಮನಿಸಿದರೆ ಈಗಿರುವ
ಪೊಲೀಸ್ ಬಲ ಅತ್ಯಂತ ಕಡಿಮೆಯಾಗಿದೆ.
ಹಾಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಮೇಲೆ ಕಾರ್ಯಭಾರ ಒತ್ತಡ ಹೆಚ್ಚಾಗುತ್ತಿದೆ.
ಕಮೀಷನರೇಟ್ ಕಚೇರಿ ಸ್ಥಾಪನೆಯಾದರೆ ನಗರದ ಕಾನೂನು-ಸುವ್ಯವಸ್ಥೆ ರಕ್ಷಣೆಗೆ ಸಾಕಷ್ಟು
ಅನುಕೂಲವಾಗಲಿದೆ.
ಸಹಕಾರಿ: ಕಮೀಷನರೇಟ್ ಅಸ್ತಿತ್ವಕ್ಕೆ ಬಂದರೆ ಪೊಲೀಸ್ ಇಲಾಖೆಗೆ ಸೌಲಭ್ಯ
ಹೆಚ್ಚಾಗಲಿದೆ. ಅಧಿಕಾರಿ-ಸಿಬ್ಬಂದಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರಲಿದೆ. ಠಾಣೆಗಳು
ಹೆಚ್ಚಾಗಲಿವೆ. ಕಾನೂನು-ಸುವ್ಯವಸ್ಥೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ.