ಶಿವಮೊಗ್ಗ-ಭದ್ರಾವತಿ ಪೊಲೀಸ್ ಕಮೀಷನರೇಟ್ : ರಾಜ್ಯ ಸರ್ಕಾರದ ನಿರ್ಲಕ್ಷ್ಯ!

ಶಿವಮೊಗ್ಗ, ಏ. ೮: ಶಿವಮೊಗ್ಗ-ಭದ್ರಾವತಿ ಒಳಗೊಂಡಂತೆ, ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪಿಸಬೇಕೆಂಬ ಹಲವು ವರ್ಷಗಳ ಕೂಗಿಗೆ ಇಲ್ಲಿಯವರೆಗೂ ರಾಜ್ಯ ಸರ್ಕಾರದಿಂದ ಸ್ಪಂದನೆ ದೊರಕಿಲ್ಲ. ಜಿಲ್ಲೆಯವರೇ ಆದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೂ, ಈ ಪ್ರಮುಖ ಆಡಳಿತಾತ್ಮಕ ವಿಷಯದತ್ತ ಚಿತ್ತ ಹರಿಸಿಲ್ಲ ಏಕೆಂಬ ಪ್ರಶ್ನೆ ನಾಗರೀಕರದ್ದಾಗಿದೆ.
ರಾಜ್ಯ ಮಾತ್ರವಲ್ಲ ದೇಶದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಎರಡನೇ ಹಂತದ ನಗರಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಪೊಲೀಸ್ ಇಲಾಖೆ ಮೂಲಗಳ ಅನುಸಾರ, ಬೆಂಗಳೂರು ನಂತರ ಅತೀ ಹೆಚ್ಚು ಎಫ್‌ಐಆರ್ ದಾಖಲಾಗುವ ಹಾಗೂ ರೌಡಿ-ಕ್ರಿಮಿನಲ್‌ಗಳಿರುವ ನಗರವಾಗಿದೆ.
ನಗರದ ಜನಸಂಖ್ಯೆ, ವ್ಯಾಪ್ತಿ ವಿಸ್ತೀರ್ಣ ಹೆಚ್ಚಾಗಿದೆ. ವಾಹನಗಳ ದಟ್ಟಣೆ ಏರುತ್ತಿದೆ. ವಿಮಾನ ನಿಲ್ದಾಣ, ರೈಲ್ವೆ ಕೋಚಿಂಗ್ ಸೇರಿದಂತೆ ಹಲವು ಹೊಸ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಆದರೆ ಜನಸಂಖ್ಯೆ, ಅಪರಾಧ ಚಟುವಟಿಕೆಗಳಿಗೆ ಅನುಗುಣವಾಗಿ
ಶಿವಮೊಗ್ಗ ನಗರದಲ್ಲಿ ಪೊಲೀಸ್ ಬಲವಿಲ್ಲವಾಗಿದೆ. ಇದರಿಂದ ಕಾನೂನು-ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವಂತಾಗಿದೆ.
ಕಮೀಷನರೇಟ್ ಕಚೇರಿ ಸ್ಥಾಪನೆಗೆ ೧೦ ಲಕ್ಷ ಜನಸಂಖ್ಯೆ, ಅಪರಾಧ ಚಟುವಟಿಕೆ ಮತ್ತೀತರ ಮಾನದಂಡವಿದೆ. ಇದರಲ್ಲಿ ಜನಸಂಖ್ಯೆ ಹೊರತುಪಡಿಸಿ, ಇತರೆಲ್ಲ ಮಾನದಂಡ ಶಿವಮೊಗ್ಗ ನಗರದಲ್ಲಿದೆ. ಈ ಕಾರಣದಿಂದ ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳ ಜೊತೆಗೆ, ಎರಡು ತಾಲೂಕುಗಳ ಕೆಲ ಹೋಬಳಿ ಕೇಂದ್ರಗಳನ್ನು ಒಗ್ಗೂಡಿಸಿದರೆ ೧೦ ಲಕ್ಷಕ್ಕೂ ಹೆಚ್ಚು ಜನಸಾಂದ್ರತೆ ಬರಲಿದೆ.
ಈ ಕಾರಣದಿಂದ ಶಿವಮೊಗ್ಗ-ಭದ್ರಾವತಿ ಒಳಗೊಂಡಂತೆ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪಿಸಬಹುದಾಗಿದೆ. ಇದಕ್ಕೆ ಕಾನೂನಾತ್ಮಕವಾಗಿ ಯಾವುದೇ ಅಡಚಣೆಗಳು ಎದುರಾಗುವುದಿಲ್ಲವಾಗಿದೆ ಎಂಬುವುದು ನಾಗರೀಕರು ಮಾತ್ರವಲ್ಲದೆ, ಕೆಲ ಪೊಲೀಸ್
ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.