
ಶಿವಮೊಗ್ಗ, ಮೇ 19: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಗಿ ಮೂರು ತಿಂಗಳಾಗುತ್ತಾ
ಬಂದಿದೆ. ವಿಮಾನಗಳ ಸಂಚಾರಕ್ಕೆ ಅನುಮತಿ ಕೂಡ ದೊರಕಿದೆ. ಆದರೆ ಪ್ರಯಾಣಿಕ ವಿಮಾನ
ಸಂಚಾರ ಆರಂಭ ಯಾವಾಗ ಎಂಬುವುದು ನಿಗೂಢವಾಗಿ ಪರಿಣಮಿಸಿದೆ!
ಈಗಾಗಲೇ ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಸಂಚಾರಕ್ಕೆ, ಇಂಡಿಗೋ ಏರ್ಲೈನ್ಸ್
ಸಂಸ್ಥೆ ಕೇಂದ್ರ ವಿಮಾನಯಾನ ಪ್ರಾಧಿಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಸಂಸ್ಥೆಯ
ಕೋರಿಕೆಯಂತೆ ಪ್ರತಿ ಪ್ರಯಾಣಿಕನಿಗೆ 500 ರೂ. ನಂತೆ, ದಿನಕ್ಕೆ ಸರಿಸುಮಾರು 78 ಸಾವಿರ
ರೂ. ಪಾವತಿಸಲು ಸರ್ಕಾರ ಸಮ್ಮತಿ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆ ನಡುವೆಯೇ, ನಿಗದಿತ ಅಗ್ನಿಶಾಮಕ ವಾಹನಗಳು ಆಗಮಿಸುವವರೆಗೆ ವಿಮಾನ
ಸಂಚಾರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಈ ಕಾರಣದಿಂದ ಕೋಟ್ಯಾಂತರ ರೂ. ವೆಚ್ಚದಲ್ಲಿ,
ವಿದೇಶದಿಂದ ಅತ್ಯಾಧುನಿಕ ಅಗ್ನಿಶಾಮಕ ದಳದ ಮೂರು ವಾಹನಗಳನ್ನು ಖರೀದಿಸಲಾಗಿತ್ತು.
ಯಾವಾಗ?: ಕಳೆದೊಂದು ತಿಂಗಳು, ಇಷ್ಟರಲ್ಲಿಯೇ ಬೆಂಗಳೂರು – ಶಿವಮೊಗ್ಗ ನಡುವೆ ವಿಮಾನ
ಸಂಚಾರ ಆರಂಭವಾಗಲಿದೆ. ಕೆಲವೇ ದಿನಗಳಲ್ಲಿ ಇಂಡಿಗೋ ಏರ್ಲೈನ್ಸ್ ಸಂಸ್ಥೆ ವಿಮಾನ
ಸಂಚಾರದ ವೇಳಾಪಟ್ಟಿ ಪ್ರಕಟಿಸಲಿದೆ. ವಿಧಾನಸಭೆ ಚುನಾವಣೆ ವೇಳೆಯೇ ವಿಮಾನ ಹಾರಾಟ
ಆರಂಭವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.
ಈ ಕುರಿತಂತೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಮಾಹಿತಿ ಕೂಡ ನೀಡಿದ್ದರು.
ಆದರೆ ಇಲ್ಲಿಯವರೆಗೂ ಶಿವಮೊಗ್ಗ – ಬೆಂಗಳೂರು ನಡುವೆ ವಿಮಾನ ಸಂಚಾರ ಆರಂಭವಾಗಿಲ್ಲ.
ವೇಳಾಪಟ್ಟಿ ಕೂಡ ಪ್ರಕಟವಾಗಿಲ್ಲ.
ಸರ್ವಾಂಗೀಣ ಅಭಿವೃದ್ದಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾನದಂಡಗಳಿಗೆ
ಅನುಗುಣವಾಗಿ, ಶಿವಮೊಗ್ಗ ಏರ್’ಪೋರ್ಟ್ ನಿರ್ಮಿಸಲಾಗಿದೆ. ರಾತ್ರಿ ವಿಮಾನಗಳ
ಲ್ಯಾಂಡಿಂಗ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು
ನಂತರ ಅತೀ ದೊಡ್ಡ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕಳೆದ ಫೆಬ್ರವರಿ
27 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣ
ಲೋಕಾರ್ಪಣೆಗೊಳಿಸಿದ್ದರು.
ಇದಕ್ಕೂ ಮುನ್ನ ಕೇಂದ್ರ ವಿಮಾನಯಾನ ಪ್ರಾಧಿಕಾರವು ನಿಲ್ದಾಣದ ತಪಾಸಣೆ ನಡೆಸಿತ್ತು.
ವಿಮಾನ ಸಂಚಾರಕ್ಕೆ ಅಗತ್ಯ ಸೌಲಭ್ಯವಿರುವ ಕುರಿತಂತೆ ಸಮಗ್ರ ತಪಾಸಣೆ ನಡೆಸಿತ್ತು.
ನಂತರ ವಿಮಾನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ತದನಂತರ ನಡೆದ ಪರೀಕ್ಷಾರ್ಥ
ವಿಮಾನ ಸಂಚಾರ ಯಶಸ್ವಿಯಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯಿಂದ
ನೇರವಾಗಿ ಶಿವಮೊಗ್ಗಕ್ಕೆ ವಿಮಾನದಲ್ಲಿ ಆಗಮಿಸಿ, ನಿಲ್ದಾಣ ಉದ್ಘಾಟಿಸಿದ್ದರು.
ಒಟ್ಟು 775 ಎಕರೆ ವಿಸ್ತೀರ್ಣದಲ್ಲಿ ರೂ.449.22 ಕೋಟಿ ರೂ. ವೆಚ್ಚದಲ್ಲಿ ವಿಮಾನ
ನಿಲ್ದಾಣ ನಿರ್ಮಿಸಲಾಗಿದೆ. ಎಟಿಆರ್ 72 ರಿಂದ ಏರ್ಬಸ್ 320 ರವರೆಗೆ ಎಲ್ಲ ರೀತಿಯ
ವಿಮಾನಗಳು, ಹಗಲು-ರಾತ್ರಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ 3.2 ಕಿ.ಮೀ ರನ್ವೇ
ನಿರ್ಮಿಸಲಾಗಿದೆ. ಹಾಗೂ 4320 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಪ್ಯಾಸೆಂಜರ್
ಟರ್ಮಿನಲ್, ಏರ್ ಟ್ರಾಫಿಕಿಂಗ್ ಸೆಂಟರ್ ಇತರೆ ಸೌಲಭ್ಯಗಳೊಂದಿಗೆ ವಿಮಾನ ನಿಲ್ದಾಣ
ನಿರ್ಮಿಸಲಾಗಿದೆ.