ಶಿವಮೊಗ್ಗ : ಫುಡ್ ಪಾಯ್ಸನ್ – ಅಸ್ವಸ್ಥಗೊಂಡ ಮಕ್ಕಳ ಸಂಖ್ಯೆ 108 ಕ್ಕೆ ಏರಿಕೆ!

ಶಿವಮೊಗ್ಗ, ಸೆ. 17: ಶಿವಮೊಗ್ಗ ತಾಲೂಕಿನ ಮೇಲಿನ ಹನಸವಾಡಿಯಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಫುಡ್ ಪಾಯ್ಸನ್ ನಿಂದ ಸುಮಾರು 100 ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.ಮಕ್ಕಳಲ್ಲಿ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿದೆ. ತಕ್ಷಣವೇ ಮಕ್ಕಳನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.ಮಕ್ಕಳ ಅನಾರೋಗ್ಯಕ್ಕೆ ಆಹಾರದಲ್ಲಿನ ವ್ಯತ್ಯಾಸ ಕಾರಣವಾಗಿದೆ ಎಂದು ಹೇಳಲಾಗಿದೆ. ಪ್ರಯೋಗಾಲಯದ ವರದಿಯ ನಂತರವಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಸೇರಿದಂತೆ ಮೊದಲಾದವರು ಭೇಟಿಯಿತ್ತು ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.