ಶಿವಮೊಗ್ಗ ಪೊಲೀಸರ ದೇಹದ ತೂಕ ಇಳಿಸಲು ವಿಶೇಷ ಶಿಬಿರ!

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಮೇ 27: ದೇಹದ ತೂಕ ಹೆಚ್ಚಿರುವ ಸ್ಥೂಲಕಾಯ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳನ್ನು, ‘ಸ್ಲಿಮ್’ ಮಾಡುವ ಕಾರ್ಯಕ್ಕೆ, ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ! ಇದಕ್ಕಾಗಿ ವಿಶೇಷ ವ್ಯಾಯಾಮ ಹಾಗೂ ಯೋಗಾಸನ ಶಿಬಿರವನ್ನು ಹಮ್ಮಿಕೊಂಡಿದೆ.ಹೌದು. ಹೆಚ್ಚಿನ ದೇಹ ತೂಕ ಹೊಂದಿರುವ ಪೊಲೀಸರ ತೂಕ ಕಡಿಮೆಗೊಳಿಸಿ, ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಸುಸ್ಥಿತಿ ತರಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಪೊಲೀಸರು ದೈಹಿಕವಾಗಿ ಸಶಕ್ತರಾಗಿರಬೇಕು. ಫಿಟ್ನೆಸ್ ವಿಷಯದಲ್ಲಿ ಇತರರಿಗೆ ಮಾದರಿಯಾಗಿರಬೇಕು ಎಂಬ ಕಾರಣದಿಂದ, ‘ಆರೋಗ್ಯಕರ ಸಮಾಜಕ್ಕಾಗಿ ಆರೋಗ್ಯಕರ ಪೊಲೀಸ್’ ಎಂಬ ಧ್ಯೇಯ ಘೋಷದೊಂದಿಗೆ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ.ವ್ಯಕ್ತಿಯ ಎತ್ತರ, ವಯಸ್ಸಿಗೆ ಅನುಗುಣವಾಗಿ ಇಂತಿಷ್ಟು ದೇಹದ ತೂಕ ಹೊಂದಿರಬೇಕು. ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಮಾನದಂಡಕ್ಕಿಂತ ಹೆಚ್ಚಿನ ತೂಕ ಹೊಂದಿರುವ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಕಾರ್ಯನಿರ್ವಹಣೆ ಮಾಡುತ್ತಿರುವ 167 ಪೊಲೀಸ್ ಅಧಿಕಾರಿ – ಸಿಬ್ಬಂದಿಗಳನ್ನು ಗುರುತಿಸಲಾಗಿದೆ.ಇವರ ಬೊಜ್ಜು ಕರಗಿಸಿ, ದೈಹಿಕವಾಗಿ ಸದೃಢಗೊಳಿಸಲು 21 ದಿನಗಳ ಕಾಲ ವಿಶೇಷ ವ್ಯಾಯಾಮ – ಯೋಗಾಸನ ಶಿಬಿರ ಆಯೋಜಿಸಲಾಗಿದೆ. ಭಾನುವಾರ ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಶಿಬಿರಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಶಿಬಿರದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಮಾನಸಿಕ ಒತ್ತಡ ನಿರ್ವಹಣೆ, ಉತ್ತಮ ಆರೋಗ್ಯಕ್ಕಾಗಿ ಪಾಲನೆ ಮಾಡಬೇಕಾದ ಆಹಾರದ ಕ್ರಮಗಳು, ದೈಹಿಕ ಸದೃಢತೆಗಾಗಿ ವ್ಯಾಯಾಮ – ಯೋಗಾಸನಗಳ ಬಗ್ಗೆ ತಜ್ಞರಿಂದ ತರಬೇತಿ – ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.ಸಮಾರಂಭದಲ್ಲಿ ಯೋಗ ವಿಸ್ಮಯ ಟ್ರಸ್ಟ್ ನ ಅನಂತ್ ಗುರೂಜಿ, ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಕಾರ್ಯಪ್ಪ ಎ ಜಿ, ಡಿವೈಎಸ್ಪಿ ಸುರೇಶ್, ಡಿಎಆರ್ ಡಿವೈಎಸ್ಪಿ ಪ್ರಕಾಶ್ ಮೊದಲಾದವರಿದ್ದರು.