ಶಿವಮೊಗ್ಗ : ಪಾರ್ಕ್’ನಲ್ಲಿ ಜ್ಯೂಸ್ ಕುಡಿದ ಇಬ್ಬರು ಮಕ್ಕಳ ಸಾವು – ತಾಯಿಯ ಮೇಲೆಯೇ ಅನುಮಾನದ ತೂಗುಕತ್ತಿ?

ಶಿವಮೊಗ್ಗ, ಜ. 6: ನಗರದ ಮಹಾತ್ಮ ಗಾಂಧಿ ಪಾರ್ಕ್‌ಗೆ ತಾಯಿಯ ಜೊತೆ ಆಗಮಿಸಿದ್ದ ಇಬ್ಬರು ಮಕ್ಕಳು, ಜ್ಯೂಸ್ ಸೇವಿಸಿದ ನಂತರ ತೀವ್ರ ಅಸ್ವಸ್ಥಗೊಂಡು  ಅಸುನೀಗಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.ಅಲೆಕ್ಸ್ ಅಂಥೋನಿ (8) ಹಾಗೂ  ಹಲಿನಾ ಅಂಥೋಣಿ (5) ಮೃತಪಟ್ಟ ಮಕ್ಕಳೆಂದು ಗುರುತಿಸಲಾಗಿದೆ. ಭದ್ರಾವತಿ ತಾಲೂಕು ಸುರಗಿತೋಪು ನಿವಾಸಿ ಗೀತಾ ತಾಯಿಯಾಗಿದ್ದಾಳೆ. ಮಕ್ಕಳ ನಿಗೂಢ ಸಾವಿಗೆ ಸಂಬಂಧಿಸಿದಂತೆ, ತಾಯಿ ಗೀತಾಳ ಸುತ್ತ ಅನುಮಾನದ ಹುತ್ತ ನಿರ್ಮಾಣವಾಗಿದೆ‌. ಆಕೆಯನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.ಘಟನೆ ಹಿನ್ನೆಲೆ: ಭದ್ರಾವತಿಯಿಂದ ತನ್ನಿಬ್ಬರು ಮಕ್ಕಳೊಂದಿಗೆ ಶಿವಮೊಗ್ಗದ ಗಾಂಧಿ ಪಾರ್ಕ್ ಗೆ ಮಂಗಳವಾರ ಸಂಜೆ ಗೀತಾ ಆಗಮಿಸಿದ್ದಾಳೆ. ಅಲ್ಲಿದ್ದ ಅಂಗಡಿಯೊಂದರಲ್ಲಿ ಜ್ಯೂಸ್ ಖರೀದಿಸಿ ಮಕ್ಕಳಿಗೆ ನೀಡಿದ್ದಾಳೆ. ನಂತರ ಪಾರ್ಕ್ ನಿಂದ ಹೊರಬಂದ ವೇಳೆ ಮಕ್ಕಳು ಅಸ್ವಸ್ಥಗೊಂಡು ಕುಸಿದು ಬಿದ್ದಿವೆ.ತಕ್ಷಣವೇ ಅಲ್ಲಿದ್ದ ಆಟೋ ಚಾಲಕರು ಖಾಸಗಿ ಆಸ್ಪತ್ರೆಯೊಂದಕ್ಕೆ ಮಕ್ಕಳನ್ನು ದಾಖಲಿಸಿದ್ದಾರೆ. ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ದ ಕಾರಣದಿಂದ, ನಂತರ ಹೆಚ್ಚಿನ  ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ‌. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮಕ್ಕಳು ತಡರಾತ್ರಿ ಮೃತಪಟ್ಟಿವೆ.ಕಳೆದ 10 ವರ್ಷಗಳ ಹಿಂದೆ ಆಂಥೋನಿ ಎಂಬುವರ ಜೊತೆ ಗೀತಾ ವಿವಾಹವಾಗಿತ್ತು. ಎರಡು ವರ್ಷಗಳ ಹಿಂದೆ ಅವರ ಪತಿ ಅಸುನೀಗಿದ್ದರು ಎಂದು ತಿಳಿದುಬಂದಿದೆ.ಅನುಮಾನ: ಗೀತಾಳೇ ಮಕ್ಕಳಿಗೆ ಜ್ಯೂಸ್ ನಲ್ಲಿ ವಿಷ ಬೆರೆಸಿ ಕುಡಿಸಿದ್ದಾಳೆ ಎಂಬ ಅನುಮಾನವು ವ್ಯಕ್ತಪಡಿಸಲಾಗಿದೆ. ಆದರೆ ಅಪಾದಿತೆಯು ಈ ಆರೋಪವನ್ನು ಅಲ್ಲಗಳೆಯುತ್ತಿದ್ದಾಳೆ. ಜ್ಯೂಸ್ ಸೇವಿಸಿದ ನಂತರ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳುತ್ತಿದ್ದಾಳೆ ಎನ್ನಲಾಗಿದೆ. ಪೊಲೀಸರು ಪಾರ್ಕ್ ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮಕ್ಕಳ ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯ ನಿರೀಕ್ಷೆಯಲ್ಲಿದ್ದಾರೆ.ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿಯನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪೂರ್ಣ ತನಿಖೆಯ ನಂತರವಷ್ಟೆ ಸತ್ಯಾಂಶ ಬೆಳಕಿಗೆ ಬರಬೇಕಾಗಿದೆ.