ಶಿವಮೊಗ್ಗ : ನಿಯಮ ಉಲ್ಲಂಘಿಸುವ ವಾಹನಗಳ ವಶಕ್ಕೆ!

ಶಿವಮೊಗ್ಗ, ಮೇ ೫: ಶಿವಮೊಗ್ಗ ನಗರದಲ್ಲಿ ಜನತಾ ಕರ್ಫ್ಯೂ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳ ಚಾಲಕರಿಗೆ ಪೊಲೀಸರು ದಂಡ ವಿಧಿಸುವ ಕಾರ್ಯ ಮುಂದುವರಿಸಿದ್ದಾರೆ. ಜೊತೆಗೆ
ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.
ಸರ್ಕಾರ ನಿಗದಿಪಡಿಸಿದ ಬೆಳಿಗ್ಗೆ ೬ ರಿಂದ ೧೦ ಗಂಟೆಯವರೆಗಿನ ಸಡಿಲಿಕೆ ಅವಧಿಯ ನಂತರವೂ, ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿರುವುದು ಕಂಡುಬರುತ್ತಿತ್ತು.
ಈ ಕಾರಣದಿಂದ ಕಳೆದ ಕೆಲ ದಿನಗಳ ಹಿಂದೆ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ದಟ್ಟಣೆ ನಿಯಂತ್ರಣಕ್ಕೆ ಕ್ರಮಕೈಗೊಂಡಿದ್ದರು. ಜೊತೆಗೆ ಪ್ರತಿಯೊಂದು ವಾಹನಗಳ ಪರಿಶೀಲನೆ ನಡೆಸಿ, ಯಾವ ಕಾರಣಕ್ಕಾಗಿ ಸಂಚರಿಸಲಾಗುತ್ತಿದೆ ಎಂಬುವುದರ ವಿವರ ಪಡೆದುಕೊಳ್ಳುತ್ತಿದ್ದಾರೆ.
ಅನಗತ್ಯವಾಗಿ ಓಡಾಡುತ್ತಿರುವವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಕೆಲ ವಾಹನಗಳನ್ನು ಕೂಡ ವಶಕ್ಕೆ ಪಡೆದುಕೊಂಡು ಕೇಸ್ ದಾಖಲಿಸುತ್ತಿದ್ದಾರೆ. ಮಂಗಳವಾರ ಸುಮಾರು ೪೦ ಕ್ಕೂ ಅಧಿಕ ಆಟೋಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.