ಶಿವಮೊಗ್ಗ, ಎ. 21: ಕೊನೆಗೂ ಬಹು ನಿರೀಕ್ಷಿತ, ವಿಳಂಬಿತ, ಇಡೀ ರಾಜ್ಯದ ಗಮನಸೆಳೆದಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದೆ.
ಅನಿರೀಕ್ಷಿತ, ಅಚ್ಚರಿ ಎಂಬಂತೆ ಮಹಾನಗರ ಪಾಲಿಕೆ ಕಾರ್ಪೋರೇಟರ್ ಎಸ್.ಎನ್.ಚನ್ನಬಸಪ್ಪ
ಅವರನ್ನು ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿದೆ. ಇದರಿಂದ ಕೆ.ಎಸ್.ಈಶ್ವರಪ್ಪ ಪುತ್ರ
ಕೆ.ಇ.ಕಾಂತೇಶ್ ಗೆ ಟಿಕೆಟ್ ಕೈ ತಪ್ಪಿದೆ!
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಎಸ್.ಈಶ್ವರಪ್ಪರವರು, ಕಳೆದ ವಾರ ಪಕ್ಷದ
ಹೈಕಮಾಂಡ್ ಸೂಚನೆಯಂತೆ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದರು. ಇದರ
ಬೆನ್ನಲ್ಲೇ ಅವರ ಬೆಂಬಲಿಗರು ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಅವರಿಗೆ
ಟಿಕೆಟ್ ನೀಡಬೇಕೆಂದು ಒತ್ತಡ ಹಾಕಿದ್ದರು. ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
ಅವರನ್ನು ಭೇಟಿಯಾಗಿ ಕೆ.ಇ.ಕಾಂತೇಶ್ ಚರ್ಚಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೇ,
ಬಿ.ಎಸ್.ಯಡಿಯೂರಪ್ಪ ಪಾಳೇಯದಲ್ಲಿ ಗುರುತಿಸಿಕೊಂಡಿರುವ ಕೆಲ ನಾಯಕರು ಟಿಕೆಟ್ ಲಾಬಿ
ತೀವ್ರಗೊಳಿಸಿದ್ದರು. ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತಂತೆ ರಾಜ್ಯ
ನಾಯಕರು ತದ್ವಿರುದ್ದ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.
ಕೆಲವರು ಕೆ.ಎಸ್.ಈ ಪುತ್ರನ ಪರ ವಕಾಲತ್ತು ವಹಿಸಿದ್ದರೆ, ಕೆಲವರು ಬಿ.ಎಸ್.ಯಡಿಯೂರಪ್ಪ
ಪಾಳೇಯದಲ್ಲಿ ಗುರುತಿಸಿಕೊಂಡಿರುವ ಕೆಲ ಮುಖಂಡರ ಪರ ಲಾಬಿ ನಡೆಸುತ್ತಿದ್ದಾರೆ ಎಂಬ
ಮಾತುಗಳು ಕೇಳಿಬಂದಿದ್ದವು. ಇದರಿಂದ ಒಮ್ಮತದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ
ಪರಿಣಮಿಸಿತ್ತು.
ಶಿವಮೊಗ್ಗ ಅಭ್ಯರ್ಥಿ ಆಯ್ಕೆ ಕುರಿತಂತೆ ಬಿಜೆಪಿ ವರಿಷ್ಠರು ಸಮಗ್ರ ಮಾಹಿತಿ ಕಲೆ
ಹಾಕಲಾರಂಭಿಸಿದ್ದರು. ಈಶ್ವರಪ್ಪ ಪಾಳೇಯದಲ್ಲಿ ಗುರುತಿಸಿಕೊಂಡಿದ್ದ, ಲಿಂಗಾಯತ
ಸಮುದಾಯಕ್ಕೆ ಸೇರಿದ ಹಾಗೂ ಕಟ್ಟಾ ಹಿಂದುತ್ವ ಪ್ರತಿಪಾದಕರಾದ ಎಸ್.ಎನ್.ಚನ್ನಬಸಪ್ಪ
ಅವರಿಗೆ ಅವಕಾಶ ಕಲ್ಪಿಸಿದೆ. ಈ ಮೂಲಕ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.